Showing posts with label Plastic. Show all posts
Showing posts with label Plastic. Show all posts

Monday, April 6, 2020

ಪ್ಲಾಸ್ಟಿಕ್‌ ಬಳಕೆಯ ದುಷ್ಪರಿಣಾಮಗಳು

a small introduction about disadvantages of using plastic


ಪ್ಲಾಸ್ಟಿಕ್‌ ಇಂದು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಕಡಿಮೆ ವೆಚ್ಚದಲ್ಲಿ ತಯಾರಿಕೆ ಹಾಗೂ ಕೈಗೆಟಕುವ ದರದಲ್ಲಿ ಈ ಪ್ಲಾಸ್ಟಿಕ್‌ ಉತ್ಪನ್ನಗಳು ದೊರೆಯುವುದರಿಂದ ಮಾನವನು ಈ ವಸ್ತುವಿಗೆ ಅವಲಂಬಿತನಾಗಿದ್ದಾನೆ. ಪ್ಲಾಸ್ಟಿಕ್‌ನಿಂದ ಉಂಟಾಗುವ ಮಾಲಿನ್ಯದಲ್ಲಿ ಏಷ್ಯಾ ಅಗ್ರಸ್ಥಾನದಲ್ಲಿದೆ. ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶಕ್ಕೆ ಈ ಪ್ಲಾಸ್ಟಿಕ್‌ ತ್ಯಾಜ್ಯ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂದು ಪ್ಲಾಸ್ಟಿಕ್‌ ತ್ಯಾಜ್ಯ ಪರಿಸರ, ಮನುಷ್ಯ, ಪ್ರಾಣಿಗಳು, ಸಸ್ಯಗಳ ಮೇಲೆ ದುಷ್ಪರಿಣಾಮವನ್ನು ಬೀರಿದೆ. ಪ್ಲಾಸ್ಟಿಕ್‌ನಿಂದ ತಯಾರಿಸಿದ ಅನೇಕ ಉತ್ಪನ್ನಗಳು ಮಾನವನ ಆರೋಗ್ಯ ಮತ್ತು ಪರಿಸರಕ್ಕೆ ಅಪಾಯವನ್ನುಂಟು ಮಾಡುತ್ತಿವೆ. ಪ್ಲಾಸ್ಟಿಕ್‌ಗಳಲ್ಲಿ ಬಿಸೆನಾಲ್‌ ಎ (ಬಿಪಿಎ), ಥಾಲೇಟ್‌ಗಳು, ಆಂಟಿಮಿನಿಟ್ರಾಕ್ಸೆ„ಡ್‌, ಪಾಲಿ-ಫ್ಲೋರಿನೇಟೆಡ್‌, ಸೀಸದಂತಹ ಅನೇಕ ರಾಸಾಯನಿಕ ಮತ್ತು ಅಪಾಯಕಾರಿ ಪದಾರ್ಥಗಳು ಇವೆ. ಅವು ಮಾನವನ ಆರೋಗ್ಯ, ಪ್ರಾಣಿಗಳ ಆರೋಗ್ಯ ಮತ್ತು ಪರಿಸರಕ್ಕೆ ಅಪಾಯ ಉಂಟು ಮಾಡುವ ಅಂಶಗಳಾಗಿವೆ.
ಪ್ಲಾಸ್ಟಿಕ್‌ ಹುಟ್ಟು ಹಾಕುವ ಅಪಾಯಗಳು ಒಂದೆರಡಲ್ಲ. ಅದು ನಾನಾ ವಿಧವಾದ ಅಡ್ಡಿ ಆತಂಕಗಳನ್ನೂ ದುಷ್ಪರಿಣಾಮಗಳನ್ನೂ ಉಂಟುಮಾಡುತ್ತದೆ. ಪ್ಲಾಸ್ಟಿಕ್‌ ತಯಾರಿಕಾ ಹಂತದಲ್ಲಿಯೇ ದೊಡ್ಡ ಮಟ್ಟದ ಮಾಲಿನ್ಯವನ್ನು ಉಂಟುಮಾಡುತ್ತದೆ. ಇದು ನೇರವಾಗಿ ಮನುಷ್ಯ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತದೆ. ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆ 1986ರಲ್ಲಿ ತೀರಾ ಅಪಾಯಕಾರಿ ತ್ಯಾಜ್ಯವನ್ನು ಉತ್ಪಾದಿಸುವ ಇಪ್ಪತ್ತು ರಾಸಾಯನಿಕಗಳ ಪಟ್ಟಿಯೊಂದನ್ನು ತಯಾರಿಸಿತ್ತು. ಅದರಲ್ಲಿ ಮೊದಲ ಐದು ರಾಸಾಯನಿಕಗಳು ಪ್ಲಾಸ್ಟಿಕ್‌ ಕಾರ್ಖಾನೆಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸುವಂಥವುಗಳಾಗಿವೆ.
ಪ್ಲಾಸ್ಟಿಕ್‌ನ ದುಷ್ಪರಿಣಾಮಗಳು
ಮನುಷ್ಯರ ಮೇಲೆ ಪ್ಲಾಸ್ಟಿಕ್‌ ತಯಾರಿಕೆಯಲ್ಲಿ ಬಳಸುವ ಅನೇಕ ರಾಸಾಯನಿಕಗಳು ಮಕ್ಕಳ ಎಲುಬುಗಳನ್ನು ವಿರೂಪಗೊಳಿಸಬಲ್ಲ ವಿಷಕಾರಿ ವಸ್ತುಗಳಾಗಿವೆ. ಇವು ವಿವಿಧ ಬಗೆಯ ಕ್ಯಾನ್ಸರ್‌ ರೋಗಕ್ಕೆ ಕಾರಣವಾಗಬಹುದು. ನರಮಂಡಲಕ್ಕೆ ಧಕ್ಕೆಯುಂಟುಮಾಡಿ ಮೆದುಳು ಮತ್ತು ಕಣ್ಣುಗಳಿಗೆ ಹಾನಿ ಮಾಡುತ್ತವೆ. ಅದಲ್ಲದೆ ಚರ್ಮಕ್ಕೆ ತೊಂದರೆ, ಪ್ಲಾಸ್ಟಿಕ್‌ ಅಂಶ ದೇಹಕ್ಕೆ ಸೇರಿಕೊಂಡಲ್ಲಿ ಮಕ್ಕಳ ಬೆಳವಣಿಗೆಗೆ ತೊಂದರೆ, ಉಸಿರಾಟದ ತೊಂದರೆ, ತಲೆನೋವು, ಆಯಾಸ, ಹಾರ್ಮೋನುಗಳ ಬದಲಾವಣೆಗಳು, ವೀರ್ಯಾಣುಗಳ ಸಂಖ್ಯೆ ಕ್ಷೀಣಗೊಳ್ಳುವಿಕೆ, ಬಂಜೆತನ ಮುಂತಾದ ತೊಂದರೆಗಳನ್ನು ಉಂಟುಮಾಡ ಬಲ್ಲದು.
ಪ್ಲಾಸ್ಟಿಕ್‌ ವಸ್ತುಗಳು ಸಾಮಾನ್ಯವಾಗಿ ಯಾವುದೇ ಒಂದು ವಸ್ತುವಿನೊಂದಿಗೂ ವರ್ತಿಸುವುದಿಲ್ಲ. ಆದರೆ ಪ್ಲಾಸ್ಟಿಕ್‌ನಲ್ಲಿರುವ ಕೆಲವೊಂದು ವಿಷಕಾರಿ ರಾಸಾಯನಿಕಗಳು ದೀರ್ಘ‌ಕಾಲದ ಸಂಪರ್ಕದಲ್ಲಿ ಆಹಾರ ಪದಾರ್ಥಗಳೊಂದಿಗೆ ವರ್ತಿಸುವ ಸಾಮರ್ಥ್ಯವನ್ನು ಹೊಂದಿವೆ. ತೇವಾಂಶವಿರುವ ಆಹಾರ ಪದಾರ್ಥಗಳು ದೀರ್ಘ‌ಕಾಲ ಪ್ಲಾಸ್ಟಿಕ್‌ನೊಂದಿಗೆ ಇದ್ದಾಗ ಅಲ್ಲಿ ರಾಸಾಯನಿಕ ಪ್ರಕ್ರಿಯೆ ಉಂಟಾಗಿ ಅವು ವಿಷವಾಗಿ ಪರಿವರ್ತನೆಗೊಳ್ಳುತ್ತವೆ. ಆ ಪದಾರ್ಥಗಳನ್ನು ನಾವು ಸೇವಿಸುವುದರಿಂದ ಅನೇಕ ರೋಗಗಳಿಗೆ ತುತ್ತಾಗಲು ಅವಕಾಶ ಕಲ್ಪಿಸಿದಂತಾಗುತ್ತದೆ.
ಪರಿಸರ ಹಾನಿ
ಜನರು ಪ್ಲಾಸ್ಟಿಕ್‌ ಚೀಲಗಳಲ್ಲಿ ಹಸಿ ತ್ಯಾಜ್ಯವನ್ನು ತುಂಬಿ ಅವೈಜ್ಞಾನಿಕವಾಗಿ ಎಲ್ಲೆಂದರಲ್ಲಿ ಎಸೆಯುತ್ತಾರೆ. ಇದರಿಂದಾಗಿ ಆ ಹಸಿ ತ್ಯಾಜ್ಯ ನೆಲದ ಸಂಪರ್ಕವನ್ನು ಪಡೆಯದೇ ಅಲ್ಲಿ ಕೊಳೆತು ನಾರುತ್ತದೆ. ಮಣ್ಣಿನಲ್ಲಿ ಸೇರಿ ಹೋಗುವ ಅವಕಾಶ ಅದಕ್ಕೆ ಇರುವುದೇ ಇಲ್ಲ. ಇದರಿಂದ ಮಣ್ಣಿನ ಫ‌ಲವತ್ತತೆ ಕಡಿಮೆಯಾಗುವುದಲ್ಲದೆ ಮಣ್ಣಿನಲ್ಲಿರುವ ಎರೆಹುಳಗಳ ಜೀವಕ್ಕೆ ಮಾರಕವಾಗಿವೆ. ಪ್ಲಾಸ್ಟಿಕನ್ನು ಪರಿಸರದಲ್ಲಿ ಎಲ್ಲೆಂದರಲ್ಲಿ ಎಸೆದಾಗ ಅದು ಮಣ್ಣಿನಲ್ಲಿ ಸಸಿಗಳ ಬೇರು ಇಳಿಯದಂತೆ ತಡೆಯುತ್ತದೆ. ಇದರಿಂದಾಗಿ ಪ್ಲಾಸ್ಟಿಕ್‌ ಇರುವಲ್ಲಿ ಒಂದು ಹುಲ್ಲು ಕಡ್ಡಿ ಕೂಡ ಹುಟ್ಟುವುದಿಲ್ಲ. ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಅನ್ನು ಎಸೆಯುವ ಪರಿಣಾಮವಾಗಿ ನೀರು ಮಣ್ಣಿನಲ್ಲಿ ಇಂಗದಂತೆ ಪ್ಲಾಸ್ಟಿಕ್‌ ತಡೆಯುತ್ತದೆ. ಇದರಿಂದ ಅಂತರ್ಜಲದ ಮಟ್ಟ ಕುಸಿಯಲು ಪ್ಲಾಸ್ಟಿಕ್‌ ಕಾರಣವಾಗುತ್ತದೆ. ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಹರಿಯುವ ಚರಂಡಿ, ನದಿಗಳಲ್ಲಿ ಬಿಸಾಡುವುದರಿಂದ ಜಲ ಮಾಲಿನ್ಯ ಉಂಟಾಗುವುದಲ್ಲದೆ ನೀರಿನ ಹರಿವಿಗೆ ತೊಂದರೆ ಉಂಟಾಗುತ್ತದೆ. ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್‌ ತಟ್ಟೆ -ಲೋಟಗಳಲ್ಲಿ ನೀರು ನಿಲ್ಲುತ್ತದೆ. ಅದರಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತವೆ. ಆದ್ದರಿಂದ ಇವು ಮಲೇರಿಯಾ, ಫೈಲೇರಿಯಾ (ಆನೆಕಾಲು ರೋಗ), ಡೆಂಗ್ಯೂ, ಚಿಕುನ್‌ ಗುನ್ಯಾದಂಥ ಸಾಂಕ್ರಾಮಿಕ ರೋಗಗಳ ಆಶ್ರಯತಾಣವಾಗುತ್ತವೆ.
ಪ್ಲಾಸ್ಟಿಕ್‌ ನೂರು ವರ್ಷ ಕಳೆದರೂ ಮಣ್ಣಿನಲ್ಲಿ ಸೇರಿ ಹೋಗುವುದಿಲ್ಲ. ಇದನ್ನು ಉರಿಸಿದಾಗ ಅದು ಮುದ್ದೆಯಾಗುತ್ತದೆಯೇ ವಿನಾ ನಾಶವಾಗುವುದಿಲ್ಲ. ಇದನ್ನು ಉರಿಸಿದಾಗ ದೊಡ್ಡ ಪ್ರಮಾಣದಲ್ಲಿ ಪೋಸ್ಟೀನ್‌, ಕಾರ್ಬನ್‌ ಮೋನಾಕ್ಸೆ„ಡ್‌, ಕ್ಲೋರಿನ್‌, ಸಲ#ರ್‌ ಡೈ ಆಕ್ಸೆ„ಡ್‌, ಡಯಾಕ್ಸಿನ್‌ ಮುಂತಾದ ವಿಷಾನಿಲಗಳು ವಾತಾವರಣ ಸೇರುತ್ತವೆ. ಇದು ವಾಯುಮಾಲಿನ್ಯಕ್ಕೆ ಕಾರಣವಾಗುತ್ತದೆ. ಈ ವಿಷಾನಿಲ ಗಾಳಿಯೊಂದಿಗೆ ಸೇರಿ ಮನುಷ್ಯನ ದೇಹವನ್ನು ಪ್ರವೇಶಿಸುವುದರಿಂದ ಶ್ವಾಸಕೋಶದ ತೊಂದರೆಗಳು, ಉಸಿರಾಟದ ತೊಂದರೆಗಳು ಹೆಚ್ಚು ಕಂಡುಬರುತ್ತವೆ.
ಪ್ರಾಣಿ, ಪಕ್ಷಿ, ಜಲಚರಗಳ ಮೇಲೆ ಹಾನಿ
ಮನೆಯಲ್ಲಿ ಉಳಿದ ಆಹಾರ ವಸ್ತುಗಳನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿ ಎಲ್ಲೆಂದರಲ್ಲಿ ಎಸೆಯುವ ಪರಿಣಾಮ ಆ ಚೀಲಗಳಲ್ಲಿರುವ ಆಹಾರ ವಸ್ತುಗಳನ್ನು ತಿನ್ನಲು ಬಯಸುವ ಪ್ರಾಣಿ ಪಕ್ಷಿಗಳು ಆಹಾರವನ್ನು ಪ್ಲಾಸ್ಟಿಕ್‌ನೊಂದಿಗೆ ನುಂಗಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತವೆ. ನಮ್ಮ ದೇಶದಲ್ಲಿ ವರ್ಷಕ್ಕೆ ಸುಮಾರು ಇಪ್ಪತ್ತು ಸಾವಿರ ಜಾನುವಾರುಗಳು ಪ್ಲಾಸ್ಟಿಕ್‌ ನುಂಗಿ ಪ್ರಾಣವನ್ನು ಕಳೆದುಕೊಳುತ್ತವೆ. ದನ-ಕರುಗಳು ಪ್ಲಾಸ್ಟಿಕನ್ನು ನುಂಗಿದಾಗ ಅವುಗಳ ಹೊಟ್ಟೆಯಲ್ಲಿ ಅದರಲ್ಲಿರುವ ರಾಸಾಯನಿಕಗಳು ಸೇರಿ ಹಾಲಿನೊಂದಿಗೆ ಬೆರೆತು ಮನುಷ್ಯನ ದೇಹವನ್ನು ಸೇರುತ್ತಿವೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಸಮುದ್ರದಲ್ಲಿ ಎಸೆಯುವ ಪರಿಣಾಮ ಅವು ಅಲ್ಲಿರುವ ಜಲಚರಗಳ ದೇಹದೊಳಕ್ಕೆ ಸೇರಿ ಜಲಚರಗಳ ಜೀವಕ್ಕೆ ಹಾನಿಯುಂಟು ಮಾಡುತ್ತದೆ.
ಒಟ್ಟಾರೆಯಾಗಿ ಪ್ಲಾಸ್ಟಿಕ್‌ನ ಅತಿಯಾದ ಬಳಕೆಯಿಂದಾಗಿ ಮಾನವನ ದೇಹಕ್ಕೆ, ಪರಿಸರಕ್ಕೆ, ಪ್ರಾಣಿಗಳ ಜೀವಕ್ಕೆ ಅಪಾರ ಹಾನಿಯುಂಟು ಮಾಡುವಲ್ಲಿ, ನಾವು ನಮಗೆ ತಿಳಿದೋ ತಿಳಿಯದೆಯೋ ಪ್ರಮುಖ ಪಾತ್ರ ವಹಿಸುತ್ತಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಂಡು ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆಗೊಳಿಸಿ, ಮರುಬಳಕೆ ಮಾಡಿ ಹಾಗೂ ಅದಕ್ಕೆ ಪರ್ಯಾಯವಾಗಿ ದೊರೆಯುವ ವಸ್ತುಗಳನ್ನು ಬಳಸಿ ಮಾನವನ ಆರೋಗ್ಯ, ಪ್ರಾಣಿಗಳ ಆರೋಗ್ಯ ಹಾಗೂ ಪರಿಸರವನ್ನು ಉಳಿಸುವ ಮಹತ್ತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಡಾ| ಚೈತ್ರಾ ಆರ್‌. ರಾವ್‌
ಅಸೋಸಿಯೇಟ್‌ ಪ್ರೊಫೆಸರ್‌,
ಕಮ್ಯುನಿಟಿ ಮೆಡಿಸಿನ್‌ ವಿಭಾಗ ಮತ್ತು ಕೋ-ಆರ್ಡಿನೇಟರ್‌, ಸೆಂಟರ್‌ ಫಾರ್‌ ಟ್ರಾವೆಲ್‌ ಮೆಡಿಸಿನ್‌, ಕೆಎಂಸಿ, ಮಣಿಪಾಲ
ರಾಘವೇಂದ್ರ ಭಟ್‌ ಎಂ.
ಆರೋಗ್ಯ ಸಹಾಯಕರು,
ಸಮುದಾಯ ವೈದ್ಯಕೀಯ ವಿಭಾಗ,
ಕೆಎಂಸಿ, ಮಣಿಪಾಲ

Friday, March 27, 2020

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

Lets reduce the use of plastic



ದಿನನಿತ್ಯದ ಕೆಲಸಗಳಲ್ಲಿ ನಾವು ಎಷ್ಟೊಂದು ಪ್ರಮಾಣದಲ್ಲಿ ಪ್ಲಾಸ್ಟಿಕ್‌ ಬಳಸುತ್ತೇವೆ. ಅವುಗಳನ್ನು ಕಡಿಮೆ ಮಾಡಿಕೊಂಡರೆ ಅತ್ತ ಪರಿಸರಕ್ಕೂ ಒಳ್ಳೆಯದು. ಇತ್ತ ವೈಯಕ್ತಿಕ ಆರೋಗ್ಯಕ್ಕೂ ಒಳ್ಳೆಯದು.
ಮನೆ ನಿರ್ವಹಣೆಯ ವಿಧಾನ ಇತ್ತೀಚೆಗಿನ ವರ್ಷಗಳಲ್ಲಿ ಅಗಾಧವಾಗಿ ಬದಲಾಗಿದೆ. ಮಣ್ಣು, ಕೆಸರಿನ ಸ್ಪರ್ಶವಿಲ್ಲದೇ ಬೆಳೆಯುವ ಮಕ್ಕಳಿಗೆ ಪ್ರಕೃತಿಯನ್ನು ಪ್ರೀತಿಸುವುದಕ್ಕೆ ಕಲಿಸುವುದಾದರೂ ಹೇಗೆ. ಆದರೆ, ಕನಿಷ್ಠಪಕ್ಷ ಪ್ರಕೃತಿಗೆ ಹಾನಿ ಮಾಡದಂತೆ ಜೀವನ ನಿರ್ವಹಣೆ ಮಾಡುವುದನ್ನಾದರೂ ಕಲಿಸುವುದು ಅನಿವಾರ್ಯ.
ಇತ್ತೀಚೆಗಿನ ಎರಡು ದಶಕಗಳಲ್ಲಿ ತುಂಬ ಅಗ್ಗವಾಗಿರುವ ಪ್ಲಾಸ್ಟಿಕ್‌, ಮಣ್ಣು ಮತ್ತು ನೀರಿಗೆ ಸಂಚಕಾರವನ್ನು ತಂದೊಡ್ಡುತ್ತಿದೆ. ಪ್ಲಾಸ್ಟಿಕ್‌ನ ವಿಪರೀತ ಬಳಕೆಯನ್ನು ನಿಯಂತ್ರಿಸುವ ಸಂಯಮವನ್ನು ಪ್ರತೀ ಮನೆಯಲ್ಲಿಯೂ ರೂಢಿಸಿಕೊಳ್ಳಬೇಕಾಗಿದೆ. ಮನೆಯಲ್ಲಿ ಈ ಬಗ್ಗೆ ಮಕ್ಕಳಿಗೆ ತಿಳಿಹೇಳುವ, ಪ್ಲಾಸ್ಟಿಕ್‌ನಿಂದ ಆದಷ್ಟು ದೂರ ಇರಿಸುವ ಕೆಲಸ ಆಗಬೇಕಾಗಿದೆ.
ಸಾಮಾನ್ಯವಾಗಿ ಹಾಲುಹಣ್ಣು, ದಿನಸಿ ಸಾಮಾನು ಖರೀದಿ, ತರಕಾರಿ ಖರೀದಿ ಸಂದರ್ಭದಲ್ಲಿ ಪ್ಲಾಸ್ಟಿಕ್‌ನ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಸಾಧ್ಯ. ಮನೆ ನಿರ್ವಹಣೆಯ ಸೂತ್ರ ವಹಿಸಿಕೊಂಡಿರುವ ಮಹಿಳೆ ಅಥವಾ ಪುರುಷರು ಈ ಬಗ್ಗೆ ಮುತುವರ್ಜಿಯಿಂದ ಯೋಚಿಸಿದರೆ ಕಸದ ಪ್ರಮಾಣ ಕಡಿಮೆ ಮಾಡಬಹುದು.
ಮುಂಜಾನೆ ಹಾಲು ತರಲು ಒಂದು ಪ್ಲಾಸ್ಟಿಕ್‌ ಕವರ್‌, ಮಧ್ಯಾಹ್ನ ಊಟ ಪ್ಯಾಕ್‌ ಮಾಡಲು ಒಂದು, ಸಂಜೆ ತರುವ ಸಾಮಾನುಗಳಿಗೆ ಇನ್ನೊಂದು, ರಾತ್ರಿ ಊಟಕ್ಕೆ ಪಾರ್ಸೆಲ್‌ ತರಲು ಮಗದೊಂದು- ಹೀಗೆ ಪ್ಲಾಸ್ಟಿಕ್‌ಗಳ ರಾಶಿಯನ್ನೇ ತಂದು ಅವನ್ನು ಕಸದಬುಟ್ಟಿಗೆ ಎಸೆಯುತ್ತೇವೆ.
ಪ್ರತಿನಿತ್ಯ ಹಾಲು ತರಲು ಕೈಚೀಲ, ಊಟದ ಬುತ್ತಿಗೆ ಮತ್ತೂಂದು ಬಟ್ಟೆಯ ಚೀಲ, ಹೊಟೇಲ್‌ನಿಂದ ಪಾರ್ಸೆಲ್‌ ತರಲು ತೆರಳುವಾಗ ಮನೆಯ ಡಬ್ಬಿಯನ್ನು ಕೊಂಡೊಯ್ಯುವ ಪರಿಪಾಠ ಇದ್ದರೆ ಎಷ್ಟೊಂದು ಪ್ಲಾಸ್ಟಿಕ್‌ ಬಳಕೆ ಕಡಿಮೆಯಾಗುತ್ತದೆ!
ಒಂದುವೇಳೆ ಚೀಲ ಮರೆತು ತರಕಾರಿ ತರಲು ಹೋದರೆ ಅಲ್ಲಿ ತೆಗೆದುಕೊಂಡ ಚೀಲವನ್ನು (ಪ್ಲಾಸ್ಟಿಕ್‌ ಆದರೂ) ಬಿಸಾಡದೆ ಮರುಬಳಕೆ ಮಾಡಬಹುದು. “ಮನೆಯೇ ಮೊದಲ ಪಾಠಶಾಲೆ, ತಾಯಿ ತಾನೇ ಮೊದಲ ಗುರು’ ಎಂಬಂತೆ ಅ,ಆ,ಇ,ಈ ಕಲಿಸಿದ ಅಮ್ಮನಿಗೆ ಪ್ಲಾಸ್ಟಿಕ್‌ ಬಳಸದಂತೆ ಜಾಗೃತಿಯ ಪಾಠ ಹೇಳಿಕೊಡುವುದು ಕಷ್ಟವೇನಲ್ಲ.
ಬೇಕೆಂದು ಹಠಮಾಡಿ, ಖರೀದಿಸಿದ ಚಾಕಲೇಟು, ಬಿಸ್ಕೆಟ್‌, ಚಿಪ್ಸ್‌ ತಿಂದು ಬಿಸಾಡುವ ಪ್ಲಾಸ್ಟಿಕ್‌ ಹೊರಕವಚವನ್ನು ಕಸದಬುಟ್ಟಿಗೆ ಹಾಕುವ ಪರಿಪಾಠ ಕಲಿಸಲೇ ಬೇಕು. ಹಳೇ ಬಟ್ಟೆಯನ್ನೇ ಬಳಸಿ ಕೈಚೀಲ ತಯಾರಿಸುವ ವಿಧಾನವನ್ನು ಮಕ್ಕಳಿಗೆ ಕಲಿಸಿದರೆ ಅವರೂ ಕೌಶಲವಂತರಾಗುತ್ತಾರೆ. ಪರಿಸರಕ್ಕೆ ಅದು ಪೂರಕ ಎಂಬ ಜ್ಞಾನವೂ ಅವರಲ್ಲಿ ಮೂಡುತ್ತದೆ. ಅಂತಹ ವಸ್ತುಗಳನ್ನು ಉಪಯೋಗಿಸಲು ಕಲಿಸಿದರೆ ಅವರಿಗೆ ಉತ್ತಮ ಚಟುವಟಿಕೆ ಮಾಡಿಸಿದಂತೆಯೂ ಸರಿ, ಪ್ಲಾಸ್ಟಿಕ್‌ ಬಳಕೆ ನಿಷೇಧವನ್ನು ಪಾಲಿಸಿದಂತೆಯೂ ಆಯಿತು. ಮಕ್ಕಳಿಗೆ ಈ ರೀತಿಯ ಜೀವನ ಶೈಲಿ ತಿಳಿಸಿದಂತೆಯೂ ಆಯಿತು.
ಪ್ಲಾಸ್ಟಿಕ್‌ನಿಂದ ದೂರ ಇರುವುದು ಕಷ್ಟವಲ್ಲ
ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡಿದರೆ ಬದುಕೇ ಕಷ್ಟ ಎನ್ನುವ ಹಾಗಿಲ್ಲ. ಸ್ವಲ್ಪವೇ ಕಾಳಜಿ ವಹಿಸಿದರೂ ಸಾಕು- ಕಸದ ಪ್ರಮಾಣ ಕಡಿಮೆ ಮಾಡುವುದು ಸಾಧ್ಯ. ಮನೆಯಿಂದ ಆಚೆ ಹೋಗುವಾಗ ಕುಡಿಯಲು ನೀರು ಕೊಂಡೊಯ್ಯುವುದು, ಸ್ಟೀಲ್‌ ಅಥವಾ ತಾಮ್ರದ ಬಾಟಲಿಗಳನ್ನು ಬಳಸುವುದು, ಪ್ಲಾಸ್ಟಿಕ್‌ ಬಾಟಲಿಯೇ ಆದರೂ ಮರುಬಳಕೆಗೆ ಯೋಗ್ಯ ಬಾಟಲಿಯನ್ನು ತೊಳೆದು ಮತ್ತೆ ಮತ್ತೆ ಬಳಸುವುದು ಉತ್ತಮ. ಹೀಗೆ ಮಾಡಿದಾಗ, ನಾವು ಕಲುಷಿತ ನೀರು ಕುಡಿಯುವ ಸಾಧ್ಯತೆಯೂ ಕಡಿಮೆ. ಸ್ವತ್ಛತೆಯನ್ನೂ ಕಾಪಾಡಿಕೊಂಡಂತೆ ಆಗುತ್ತದೆ.
ಮನೆಯಲ್ಲಿ ಶುಭಕಾರ್ಯಗಳಿರುವಾಗ ನೀರು ಪೂರೈಸಲು ಪ್ಲಾಸ್ಟಿಕ್‌ ಕಪ್‌ ಬಳಸಬೇಡಿ. ಪಂಕ್ತಿಯಲ್ಲಿ ನೀರು ಕೊಡುತ್ತ ಬರುವ ಹಳೇ ಪದ್ಧತಿಯೇ ಉತ್ತಮ. ಅಗತ್ಯ ಇದ್ದವರಿಗೆ ಬಿಸಿನೀರು ಕೊಟ್ಟರಾಯಿತು.
ಮನೆಯ ತಿಂಗಳ ದಿನಸಿ ಸಾಮಾನುಗಳನ್ನು ತರಲೆಂದು ಹೋಗುವಾಗ ಆದಷ್ಟು ದೊಡ್ಡ ಪ್ಯಾಕಿನ ಸಾಮಾನುಗಳನ್ನು ಅಂದರೆ ಶ್ಯಾಂಪೂ, ಡಿಟರ್ಜೆಂಟ್‌ ಇತ್ಯಾದಿ ಸಾಮಾನುಗಳ ಸ್ಯಾಚೆಟ್‌ ತೆಗೆದುಕೊಳ್ಳುವ ಬದಲು ಬಾಟಲಿ, ಅಥವಾ ದೊಡ್ಡ ಪ್ಯಾಕ್‌ ತೆಗೆದುಕೊಳ್ಳಬಹುದು. ಸಣ್ಣ ಸಣ್ಣ ಪ್ಲಾಸ್ಟಿಕ್‌ ಸ್ಯಾಚೆಟ್‌ಗಳನ್ನು ಕತ್ತರಿಸಿ, ಅದು ಕಸದ ರಾಶಿಗೆ ಸೇರುವುದನ್ನು ತಪ್ಪಿಸಬಹುದು. ಪ್ರವಾಸದ ಸಮಯದಲ್ಲಿ ಸಣ್ಣ ಪ್ಯಾಕೆಟ್‌ಗಳ ಅನಿವಾರ್ಯತೆ ಏನೋ ಇರುತ್ತದೆ. ಆದರೆ, ಬೇರೆ ದಿನಗಳಲ್ಲಿ ಅವುಗಳ‌ನ್ನು ಆದಷ್ಟು ದೂರಮಾಡಿದರೆ ಒಳ್ಳೆಯದಲ್ಲವೇ? ಕೆಲವೊಮ್ಮೆ ದೊಡ್ಡ ಪ್ಯಾಕ್‌ಗಳನ್ನು ಕೊಳ್ಳುವಾಗ ಬೆಲೆಯೂ ಕಡಿಮೆ ಆಗಿರುತ್ತದೆ. ರಿಯಾಯತಿಯೂ ದೊರೆಯಬಹುದು.
ಮನೆಗೆ ತುಂಬಾ ಜನ ನೆಂಟರು ಬಂದಾಗ ಅವರಿಗೆ ನೀಡಲು ದೊಡ್ಡ ಪ್ರಮಾಣದಲ್ಲಿ ಹಣ್ಣಿನ ರಸವನ್ನು ತಯಾರಿಸಿ ನೀಡಲು ಕಷ್ಟವೆನಿಸಿದರೆ ನಿಂಬೆ ಶರಬತ್ತು ಮಾಡಿದರೆ ಅವರ ಆರೋಗ್ಯಕ್ಕೂ ಉತ್ತಮ. ಕಾಬೋìನೇಟೆಡ್‌ ಪಾನೀಯಗಳನ್ನು ತರಿಸಿ ಫ್ರಿಜ್‌ನಲ್ಲಿ ಇಡುವುದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಲ್ಲ.
ಮಕ್ಕಳಿಗೆ ಮನೆಯಲ್ಲಿಯೇ ಹಣ್ಣಿನ ರಸ ಕೊಡುವುದರಿಂದ ಅವರಿಗೆ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತವೆ. ಈ ಕೆಲಸದಲ್ಲಿ ಮಕ್ಕಳನ್ನು ಭಾಗಿಯಾಗಿಸಿದರೆ ಅವರಿಗೆ “ನಾವೇ ಮಾಡಿದ ಪಾನೀಯ’ ಎಂಬ ಹೆಮ್ಮೆ ಮೂಡುತ್ತದೆ. ಮನೋಲ್ಲಾಸದ ಕಾಯಕ ಇದು.
ಕಳೆದುಹೋದದ್ದು ಚಿನ್ನ !
ಹಳೆಯ ಫ್ಯಾಶನ್‌ ಎನಿಸಿದರೂ “ಓಲ್ಡ… ಈಸ್‌ ಗೋಲ್ಡ…’ ಎಂಬುದು ಎಲ್ಲರೂ ನಂಬಿರುವ ಸಮಾಚಾರವೇ ಆಗಿದೆ. ಓಲ್ಡ… ಫ್ಯಾಷನ್‌ ಎಂದು ಮಾತನಾಡಿಕೊಳ್ಳುವವರು ಮೂರನೇ ದಿನ ನಿಮ್ಮನ್ನೇ ಅನುಸರಿಸುತ್ತಾರೆ. ಪ್ರಯಾಣ ಸಮಯದಲ್ಲಿ ತಿನ್ನಲೆಂದು ಕೊಂಡ ಕುರುಕುಲು ತಿಂಡಿ, ಹಣ್ಣು ಇತ್ಯಾದಿಗಳ ಕವರುಗಳನ್ನು ರಸ್ತೆಯಲ್ಲೇ ವಾಹನದ ಕಿಟಕಿಯಿಂದ ಬಿಸಾಡುವ ಬದಲು, ಬಸ್ಸು, ರೈಲು ನಿಲ್ದಾಣಗಳಲ್ಲೋ ಅಥವಾ ಉಳಿದುಕೊಂಡ ಹೊಟೇಲ್‌ ಕೋಣೆಯ ಕಸದಬುಟ್ಟಿಗೆ ಹಾಕುವ ಅಭ್ಯಾಸ ರೂಢಿಸಿಕೊಂಡರೆ ಒಳ್ಳೆಯದು. ಆ ಸಮಯದಲ್ಲಿ ಕುಡಿಯಲು ಹಣ್ಣಿನ ರಸವನ್ನು ಪಡೆದುಕೊಳ್ಳುವಾಗ ಪ್ಲಾಸ್ಟಿಕ್‌ ಸ್ಟ್ರಾ ಬಳಕೆ ಬೇಡ. ಕಚ್ಚಿ ಕುಡಿದರೆ ರುಚಿ ಜಾಸ್ತಿ. ತೀರಾ ಅಗತ್ಯವಿದ್ದರೆ ಪೇಪರ್‌ ಸ್ಟ್ರಾ ಕೇಳಿಪಡೆಯಿರಿ.
ಎಲ್ಲೆಲ್ಲಿ ಬಿಸಾಡಿದ ಕವರುಗಳು, ಸ್ಟ್ರಾಗಳು ಪ್ರಾಣಿಗಳ ಹೊಟ್ಟೆ ಸೇರಿ ಅವುಗಳ ಪ್ರಾಣಿಹಾನಿಯಾಗುವ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದುತ್ತೇವೆ. ಆದ್ದರಿಂದ ಅವುಗಳ ಮೇಲಿನ ಕರುಣೆಯಿಂದಲಾದರೂ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಿ.
ನೀವು ಕಾರಿನಲ್ಲಿ ಅಥವಾ ದ್ವಿಚಕ್ರವಾಹನದಲ್ಲಿ ಪ್ರಯಾಣಿಸುವಿರಾದರೆ ಅದರಲ್ಲಿ ಬ್ಯಾಗನ್ನೋ, ಅಥವಾ ಹಿಂದೆ ಪ್ಯಾಕ್‌ ಮಾಡಿತಂದಿರುವ ರಟ್ಟಿನ ಬಾಕ್ಸ್‌ ಅನ್ನೋ ಇಟ್ಟುಕೊಂಡರೆ, ಸಾಮಾನು ತರುವಾಗ ಅದರಲ್ಲಿ ಹಾಕಿ ತರಲು ಸಾಧ್ಯ.
ಹಳೆ ಸಾಮಾನುಗಳನ್ನು ಸಾಧ್ಯವಾದಷ್ಟು ಮರುಬಳಕೆ ಮಾಡಿ. ಅವು ನೋಡುವುದಕ್ಕೆ ಚಂದವಿಲ್ಲದೇ ಇದ್ದರೂ ಪರವಾಗಿಲ್ಲ, ಬಳಕೆಯೋಗ್ಯವಾಗಿ ಇರುವಾಗಲೇ ಅವುಗಳನ್ನು ಕಸದ ಬುಟ್ಟಿಗೆ ಎಸೆಯಬೇಡಿ. ಖಾಲಿ ಡಬ್ಬಿಗಳನ್ನು ಬಳಸಿ ಗಿಡನೆಡುವ ಹವ್ಯಾಸ ನಿಜಕ್ಕೂ ಉತ್ತಮವಾದುದು. ಇದರಿಂದ ಅಡುಗೆಗೆ ಉತ್ತಮ ತರಕಾರಿಯೂ ಸಿಗುತ್ತದೆ. ಕಸದ ಪ್ರಮಾಣವನ್ನು ತಗ್ಗಿಸಿದಂತಾಗುತ್ತದೆ.
“ನಾನು ಮಾತ್ರ ಈ ಕಾಳಜಿ ಮಾಡಿದರೆ ಜಗತ್ತು ಬದಲಾಗುತ್ತದೆಯೇ’ ಎಂಬ ಸಿನಿಕತನ ಬೇಡ. ಪ್ರತಿಯೊಬ್ಬರೂ ಕೈ ಜೋಡಿಸಿದರೆ ಬದಲಾವಣೆ ಅಸಾಧ್ಯವಲ್ಲ. ಇತರರಿಗೆ ಪ್ರೇರಣೆ ಆಗುವ ದೃಷ್ಟಿಯಿಂದಲಾದರೂ ಪ್ಲಾಸ್ಟಿಕ್‌ನಿಂದ ದೂರ ಇರುವ ನಿರ್ಧಾರ ಮಾಡಿ.
ಪ್ಲಾಸ್ಟಿಕ್‌ನಿಂದ ದೂರ ಆರೋಗ್ಯಕ್ಕೆ ಹತ್ತಿರ
.ಕಾರ್ಬೋನೇಟೆಡ್‌ ಪಾನೀಯಗಳನ್ನು ಕುಡಿಯಬೇಡಿ.
.ಮನೆಯಲ್ಲಿಯೇ ಹಣ್ಣಿನ ರಸ ತಯಾರಿಸಿ
.ಸಮಾರಂಭಗಳಲ್ಲಿ ಸ್ಟೀಲ್‌ ಲೋಟಗಳಲ್ಲಿಯೇ ನೀರು ಹಂಚಿ.
.ತರಕಾರಿ ತರಲು ಮನೆಯಿಂದಲೇ ಚೀಲ ಕೊಂಡು ಹೋಗಿ
.ತ್ಯಾಜ್ಯವನ್ನು ಬಳಸಿ ತರಕಾರಿ ಬೆಳೆಸುವ ಪ್ರಯತ್ನ ಮಾಡಿ.
ಸಾವಿತ್ರಿ ಶ್ಯಾನುಭಾಗ್‌

Thursday, March 26, 2020

ಸ್ವಚ್ಛತೆಯೇಕೆ ನಮಗೆ ಆದ್ಯತೆ ಆಗುತ್ತಿಲ್ಲ?

Why cleanliness is not a topmost priority in India




ಎಲ್ಲಾ ಪ್ರಯತ್ನಗಳನ್ನು ಮಾಡಿಯೂ ಸೋತಾಗ ನಾವು ದೇವರ ಮೊರೆಹೋಗುವುದು ಸಾಮಾನ್ಯ. ಮಹಾಭಾರತದಲ್ಲಿ ಮಹಾ ಮಹಿಮರೆದುರು ದ್ರೌಪದಿಯ ವಸ್ತ್ರಾಪಹರಣವಾದಾಗ ಕೊನೆಗೆ ಆಕೆಯನ್ನು ಕಾಪಾಡಿದ್ದು ಶ್ರೀ ಕೃಷ್ಣನೇ.
ಇದೀಗ ಕಸದ ಬುಟ್ಟಿಗಳ ಹಾಗೆ ಮಾರ್ಪಟ್ಟಿರುವ ನಮ್ಮ ದೇಶದ ಬೀದಿಗಳನ್ನು ಕಂಡಾಗ ಈ ದೇಶವನ್ನು ಸ್ವಚ್ಛಗೊಳಿಸಲು ದೇವರೇ ಬಂದರೂ ಅಸಾಧ್ಯ ಅನಿಸುತ್ತಿದೆ. ರಸ್ತೆ ಬದಿಯಲ್ಲಿ, ಬೀದಿ ಬೀದಿಗಳಲ್ಲಿ, ಬೀದಿ ಬದಿಯ ಮೋರಿಗಳಲ್ಲಿ, ಸಾರ್ವಜನಿಕ ತೋಡುಗಳಲ್ಲಿ ಎಲ್ಲಿ ನೋಡಿದರೂ ಪ್ಲಾಸ್ಟಿಕ್‌ ತ್ಯಾಜ್ಯಗಳು, ಹರಕು ಬಟ್ಟೆಗಳು ಬಳಸಿ ಎಸೆದ ಸರಕುಗಳ ಗಂಟು ಮೂಟೆಗಳು. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಿ ನೋಡಿದರೂ ತ್ಯಾಜ್ಯಗಳದ್ದೇ ಕಾರುಬಾರು. ಸ್ವಚ್ಛ ಭಾರತದ ಕನಸು ಹಾಗೂ ಪ್ರಯತ್ನವನ್ನು ನೋಡಿ ನಗುತ್ತಿದ್ದಾನೆ ಪ್ಲಾಸ್ಟಿಕ್‌ ರಾಕ್ಷಸ. ಮಹಾತ್ಮ ಗಾಂಧೀಜಿಯವರ ಬಗ್ಗೆ ಭಾರೀ ಅಭಿಮಾನವಿಟ್ಟುಕೊಂಡ ಜನರಿಗೆ ಅವರ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಇಚ್ಛೆ ಇಲ್ಲದಿರುವುದು ವಿಷಾದನೀಯ.
ಒಂದಷ್ಟು ವರ್ಷಗಳಿಂದ ಸ್ವಚ್ಛ ಭಾರತದ ಕಲ್ಪನೆಯೊಂದಿಗೆ ವಿವಿಧ ಅಭಿಯಾನಗಳಲ್ಲಿ ವಿದ್ಯಾರ್ಥಿಗಳ ಜೊತೆಗೆ ಕಸ ಹೆಕ್ಕಿ, ಜಾಥಾಗಳಲ್ಲಿ ಕಿರುಚಿ, ಜನ ಜಾಗೃತಿ ಮೂಡಿಸುವ ಭ್ರಮೆಯಲ್ಲಿ ಭಾಗವಹಿ ಸಿದ್ದಾಯಿತು. ಆದರೆ ಜನರ ಮನೋಭಾವದಲ್ಲಿ ಹೆಚ್ಚಿನ ಬದಲಾವಣೆಯೇನೂ ಕಾಣಿಸುತ್ತಿಲ್ಲ. ಕಂಡಲ್ಲಿ ಕಸ ಎಸೆಯುವ ಕೆಟ್ಟ ಅಭ್ಯಾಸಗಳು ದೂರವಾಗಿಲ್ಲ. ಸ್ವತಂತ್ರ ಭಾರತದಲ್ಲಿ ಕಸ ಎಸೆಯುವುದು ನಮ್ಮ ಹಕ್ಕು ಅಂತ ಅಂದು ಕೊಂಡ ಹಾಗಿದೆ ಈ ಜನರು. ನಿಂತಲ್ಲೇ ಕ್ಯಾಕರಿಸಿ ಉಗುಳುವ ಕೊಳಕರಿಗೆ ಸ್ವತ್ಛತೆಯ ಪರಿಜ್ಞಾನವೇ ಇಲ್ಲ.
ವ್ಯಾಪಾರಿಗಳಿಗಂತೂ ತಮ್ಮ ಲಾಭ ನಷ್ಟಗಳದ್ದೇ ಚಿಂತೆ. ಯಾವ ಅಭಿಯಾನಗಳೂ ಇವರ ಲಾಭ ಬಡುಕತನದ ಮನೋಭಾವವನ್ನು ಬದಲಿಸುವುದಿಲ್ಲ. ನಗರದಲ್ಲಿ ಪ್ಲಾಸ್ಟಿಕ್‌ಗಳನ್ನು ಹರಿಯಬಿಡುವವರೇ ಇವರು.ಆಡಳಿತ ಪ್ಲಾಸ್ಟಿಕ್‌ ವಸ್ತುಗಳನ್ನು ನಿಷೇಧಿಸಿದ್ದರೂ ಇವರು ನಿಷೇಧಿಸಿಲ್ಲ. ಹೆಚ್ಚಿನ ಅಂಗಡಿಗಳಲ್ಲಿ ಇನ್ನೂ ಪ್ಲಾಸ್ಟಿಕ್‌ ಕವರುಗಳಿಗೇ ಅಗ್ರಸ್ಥಾನ. ಜನರಿಗೂ ಇದು ಸುಲಭದಲ್ಲಿ ಸಿಗುವ ಸಾಧನ.
ಸರಕಾರದ ಯಾವ ಅಭಿಯಾನಗಳೂ ಜನರ ಸಹಭಾಗಿತ್ವ ಇಲ್ಲದೆ ಯಶಸ್ಸನ್ನು ಪಡೆಯಲಾರದು. ಆಡಳಿತದ ಅತಿ ದೊಡ್ಡ ಸಮಸ್ಯೆಯೇ ಘನತ್ಯಾಜ್ಯ ನಿರ್ವಹಣೆ. ದಿನಕ್ಕೆ ಟನ್‌ಗಟ್ಟಲೆಗಳಷ್ಟು ಸಂಗ್ರಹವಾಗುವ ತ್ಯಾಜ್ಯವನ್ನು ಏನು ಮಾಡುವುದು? ಎಲ್ಲಿ ಸಂಗ್ರಹಿಸುವುದು?
ಸುತ್ತ ದುರ್ವಾಸನೆ ಬೀರುವ ಪರಿಸರ ಮಾಲಿನ್ಯವನ್ನುಂಟು ಮಾಡುವ ತ್ಯಾಜ್ಯಗಳಿಗೆ ಮುಕ್ತಿ ಕೊಡುವುದೆ ಬಹು ದೊಡ್ಡ ಸಮಸ್ಯೆ. ಆಡಳಿತದ ವೈಫ‌ಲ್ಯವನ್ನು ಎಲ್ಲರೂ ಎತ್ತಿ ಹಿಡಿಯುತ್ತಾರೆ. ಆದರೆ ಈ ಕಸದ ರಾಶಿಗಳ ಸಮಸ್ಯೆಯಲ್ಲಿ ನಮ್ಮ ಪಾಲೆಷ್ಟಿದೆ ಎಂಬುದನ್ನು ಯಾರೂ ಯೋಚಿಸುವುದಿಲ್ಲ.ತ್ಯಾಜ್ಯಗಳನ್ನು ತಂದು ಬೀದಿಗೆಸೆಯುವ ಅನಾಗರಿಕರೇ ಆಡಳಿತ ಸರಿ ಇಲ್ಲ ಅಂತ ದೂಷಿಸುತ್ತಾರೆ. ಕಸಕಡ್ಡಿಗಳನ್ನು ಒಟ್ಟುಮಾಡಿ ತಂದು ಬೀದಿಬದಿಯ ಮೋರಿಗಳಿಗೆ ಎಸೆಯುವವರೇ ಚರಂಡಿ ವ್ಯವಸ್ಥೆ ಸರಿ ಇಲ್ಲ ಅಂತ ದೂರುತ್ತಾರೆ.
ಇದೀಗ ಹೆಚ್ಚಿನ ಆಡಳಿತ ಸಂಸ್ಥೆಗಳೂ ಸ್ವತ್ಛತೆಯತ್ತ ಗಮನಹರಿಸುತ್ತಿವೆ ಎನ್ನುವುದು ವಾಸ್ತವ. ಕಸ ವಿಲೇವಾರಿ, ತ್ಯಾಜ್ಯ ನಿರ್ವಹಣೆ, ತ್ಯಾಜ್ಯದಿಂದ ಗೊಬ್ಬರ ತಯಾರಿ ಮುಂತಾದ ಯೋಜನೆಗಳ ಮೂಲಕ ಸ್ವತ್ಛ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಅವುಗಳು ಪ್ರಯತ್ನಿಸುತ್ತಿವೆ.ಆದರೆ ಜನರಲ್ಲಿ ಜಾಗೃತಿ ಮೂಡದ ಹೊರತು ಏನನ್ನೂ ಸಾಧಿಸಲು ಸಾಧ್ಯವಿಲ್ಲ.
ಜನರಿಗೆ ಎಲ್ಲವನ್ನೂ ಆಡಳಿತವೇ ಮಾಡಬೇಕೆಂಬ ಹಂಬಲ.ಬೀದಿ ಬದಿಯಲ್ಲಿ ಗೋಣಿಗಳಲ್ಲಿ, ಪ್ಲಾಸ್ಟಿಕ್‌ ಕವರುಗಳಲ್ಲಿ ತೆಗೆದಷ್ಟೂ ರಾಶಿ ಬೀಳುವ ಕೊಳಕುಗಳನ್ನು ಸ್ವತ್ಛಗೊಳಿಸಲು ಪೌರ ಕಾರ್ಮಿಕರು ದುಡಿಯುವುದನ್ನು ಕಂಡಾಗಲೆಲ್ಲ ಅವರ ಬಗ್ಗೆ ಗೌರವ ಮೂಡುತ್ತದೆ. ನಗರಗಳನ್ನು ಸ್ವಚ್ಚವಾಗಿರಿಸುವಲ್ಲಿ ಅವರ ಶ್ರಮ ಶ್ಲಾಘನೀಯ. ನಾವು ಬಳಸಿ ಎಸೆಯುವುದನ್ನೆಲ್ಲ ಸಂಗ್ರಹಿಸಿ ತ್ಯಾಜ್ಯ ವಿಂಗಡಣೆ ಮಾಡುವ ಅವರ ಪ್ರಯತ್ನ, ಸಹನೆಗೊಂದು ಸಲಾಂ ಹೇಳಲೇಬೇಕು.
ಆದರೆ ಕಸ ಎಸೆಯುವ ನಮ್ಮ ಜನರ ಸಂಸ್ಕೃತಿ ಬದಲಾಗುವುದು ಯಾವಾಗ? ಎಲ್ಲದಕ್ಕೂ ಮುಂದುವರಿದ ದೇಶವನ್ನು ಮಾದರಿ ಯಾಗಿರಿಸಿ ಮಾತನಾಡುವ ನಮ್ಮವರಿಗೆ ಸ್ವತ್ಛತೆಯೇಕೆ ಮಾದರಿ ಯಾಗುವುದಿಲ್ಲ? ಬುದ್ಧಿವಂತರು, ವಿದ್ಯಾವಂತರುಗಳೇ ಈ ಕಸಗಳ ಮೂಲಗಳು. ಸದಾ ಏನಾದರೂ ತಿನ್ನುವ ಚಪಲ, ಅಂಗಡಿಗಳಲ್ಲಿ ಸಿಗುವ ಪ್ಲಾಸ್ಟಿಕ್‌ ಕವರಿನಲ್ಲಿರುವ ಅನಾರೋಗ್ಯಕರ ವಿಷಕಾರಿ ತಿಂಡಿಗಳು, ಬೇಕರಿಗಳಲ್ಲಿ ಸಿಗುವ ರೆಡಿಮೇಡ್‌ ತಿಂಡಿಗಳು, ಸ್ವಿಗ್ಗಿ, ಜೊಮೇಟೊ ದಂತಹ ಹೊಸ ಕಂಪೆನಿಗಳು,ಬಹು ರಾಷ್ಟ್ರೀಯ ಉದ್ದಿಮೆಗಳ ತಂಪು ಪಾನೀಯದ ಬಾಟಲಿಗಳು, ಅಲ್ಲಲ್ಲಿ ಎಸೆದ ಮಿನರಲ್‌ ವಾಟರ್‌ ಬಾಟಲಿಗಳು ಇವೆಲ್ಲವೂ ಯಾರ ಕೊಡುಗೆಗಳು? ಅನಗತ್ಯ ವಸ್ತುಗಳನ್ನು ಬಳಸುವುದೂ ನಾವೇ ಅಲ್ಲಲ್ಲಿ ಎಸೆಯುವುದೂ ನಾವೇ.ಆಡಳಿತವನ್ನು ದೂಷಿಸುವವರೂ ನಾವೇ. ನಾವು ಮಾಡಿದ ಕಸವನ್ನು ಇನ್ನೊಬ್ಬ ಬಂದು ಬಿಟ್ಟಿಯಾಗಿ ಸ್ವತ್ಛಗೊಳಿಸಬೇಕು ಎಂಬ ಕಲ್ಪನೆಯೇ ಕೆಟ್ಟದು. ನಮ್ಮ ಯುವಜನತೆಯಲ್ಲಿ ಶೇಕಡಾ ಅರುವತ್ತರಷ್ಟು ಜನರಿಗೂ ಸ್ವತ್ಛತೆಯ ಕುರಿತು ಕಾಳಜಿಯಿಲ್ಲ. ಯಾವುದಾದರೂ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವವರು ಮಾತ್ರ ಈ ಅಭಿಯಾನದಲ್ಲಿ ಕಾಳಜಿಯಿಂದ ಭಾಗವಹಿಸುವುದು ಬಿಟ್ಟರೆ ಉಳಿದಂತೆ ಎಷ್ಟೋ ಜನ ತಮ್ಮ ಕಸಗಳನ್ನು ರಸ್ತೆಗೆ ಎಸೆಯುವವರೇ.
ಸ್ವಚ್ಛತೆಯ ಪರಿಕಲ್ಪನೆ ಅಸಾಧ್ಯವಾದ ವಿಷಯವೇನಲ್ಲ. ಆದರೆ ಎಲ್ಲ ರಲ್ಲೂ ಬದ್ದತೆಯಿರಬೇಕು. ಸ್ವಇಚ್ಛೆಯಿಂದ ಇದರಲ್ಲಿ ತೊಡಗಿಸಿಕೊಳ್ಳ ಬೇಕು. ನಮ್ಮ ತ್ಯಾಜ್ಯ ನಮ್ಮ ಜವಾಬ್ದಾರಿಯೆಂಬ ಪರಿಕಲ್ಪನೆ ಇರಬೇಕು.ಕಂಡ ಕಂಡಲ್ಲಿ ಕಸ ಎಸೆಯುವ ಕೊಳಕು ಸಂಸ್ಕೃತಿಯಿಂದ ಮೊದಲು ಹೊರಬರಬೇಕು. ಆದರೆ ಶೇ.70ರಷ್ಟು ಶಿಕ್ಷಿತರಿರುವ ನಮ್ಮ ದೇಶದಲ್ಲಿ, ಬುದ್ಧಿವಂತ ಜಿಲ್ಲೆಗಳ ಹೆದ್ದಾರಿಯ ಇಕ್ಕೆಲಗಳು ಮೋರಿಗಳು ಕಸದ ರಾಶಿಗಳಿಂದ ರಾರಾಜಿಸುತ್ತಿರುವುದು ಕಂಡಾಗಲೆಲ್ಲ ಈ ದೇಶವನ್ನು ಸ್ವತ್ಛಗೊಳಿಸಲು ದೇವರೇ ಬಂದರೂ ಅಸಾಧ್ಯ ಅನಿಸುತ್ತದೆ. ಆದರೂ ಕೊನೆಯದಾಗಿ ಆ ಕಾಣದ ದೇವರಲ್ಲಿ ಒಂದು ಕಳಕಳಿಯ ನಿವೇದನೆ. ಓ ದೇವರೇ ನನ್ನ ದೇಶವನ್ನು ಈ ಕಸಕಡ್ಡಿಗಳಿಂದ ರಕ್ಷಿಸಲಾರೆಯಾ?
– ವಿದ್ಯಾ ಅಮ್ಮಣ್ಣಾಯ, ಕಾಪು