Showing posts with label Kannada. Show all posts
Showing posts with label Kannada. Show all posts

Wednesday, June 24, 2020

Flipkart includes Kannada, Tamil, Telugu on its platform

Flipkart includes Kannada, Tamil, Telugu on its platform

Bengaluru: Flipkart, a homegrown e-commerce marketplace, on Wednesday enabled three new languages on its platformTamil, Telugu, and Kannada – as part of its vision to make online commerce more inclusive and accessible for Indian language users.
The launch would help reduce barriers to e-commerce for native language speakers, the company said in a statement.
“Following the launch of Hindi interface last year, the new regional languages interface have been built on Flipkarts Localisation and Translation Platform that will empower customers to comfortably undertake an end-to-end e- commerce journey in their local language with ease,” the statement said.

Wednesday, April 15, 2020

ಫೋಟೋಗ್ರಾಫ‌ರ್‌ ಆಗುತ್ತೇನೆ ಎಂದವರು ಸಿಎಂ ಆದಾಗ!

when udbhav thackeray wanted to become a photographer then became chief minister of maharasthra


ಅಂದು ಶಿವಸೇನೆಯ ಯಾವೊಬ್ಬ ಕಾರ್ಯಕರ್ತರಿಗೂ ಮುಂದೊಂದು ದಿನ ರಾಜ್‌ ಠಾಕ್ರೆ ಪಕ್ಷ ತೊರೆಯುತ್ತಾರೆ, ಅದಕ್ಕಿಂತ ಹೆಚ್ಚಾಗಿ ಮಹಾರಾಷ್ಟ್ರದ ರಾಜಕೀಯ ದಲ್ಲಿ ಲೆಕ್ಕಕ್ಕೇ ಇಲ್ಲದಂತಿದ್ದ, ಕ್ಯಾಮೆರಾ ಹಿಡಿದುಕೊಂಡು ತನ್ನ ಲೋಕದಲ್ಲಿ ತಾನು ಮುಳುಗಿದ್ದ ಉದ್ಧವ್‌ ಠಾಕ್ರೆ ಎಂಬ ನಾಚಿಕೆ ಸ್ವಭಾವದ ಯುವಕ ಶಿವಸೇನೆಯ ನೊಗ ಹೊರುತ್ತಾರೆ ಎಂಬ ಕಲ್ಪನೆಯೇ ಇರಲಿಲ್ಲ!
ಒಂದು ದಿನ ಆಟವಾಡುತ್ತಿರುವಾಗ ಉದ್ಧವ್‌ ಎಡವಿ ಬಿದ್ದರಂತೆ. ಇದನ್ನು ನೋಡಿದ ರಾಜ್‌ ಮತ್ತು ಅವರ ಗೆಳೆಯರು ಬಿದ್ದೂ ಬಿದ್ದು ನಕ್ಕರಂತೆ.
ರಮೇಶ್‌ ಕಿಣಿ ಹತ್ಯೆಯ ಪ್ರಕರಣದಲ್ಲಿ ರಾಜ್‌ ಠಾಕ್ರೆಯವರ ಹೆಸರು ಕೇಳಿಬಂದಿತ್ತು. ಮಾಟುಂಗದ ನಿವಾಸಿಯಾಗಿದ್ದ ರಮೇಶ್‌ ಕಿಣಿಯವರ ದೇಹ ಪುಣೆಯಲ್ಲಿ ಸಿಕ್ಕಿತ್ತು.
ಅದು 90ರ ದಶಕ. ಬಾಳಾ ಠಾಕ್ರೆ ನೇತೃತ್ವದಲ್ಲಿ ಮರಾಠಿ, ಮರಾಠಾ ಹಾಗೂ ಹಿಂದುತ್ವದ ಅಸ್ಮಿತೆಯ ಅಶ್ವವೇರಿ ಮುನ್ನುಗ್ಗುತ್ತಿತ್ತು ಶಿವಸೇನೆ. ಆ ಸಮಯದಲ್ಲೇ ಬಾಳಾ ಠಾಕ್ರೆಯವರ ನಂತರ ಆ ಪಕ್ಷದ ನೊಗ ಹೊರುವ ಬೃಹತ್‌ ಜವಾಬ್ದಾರಿ ಯಾರದ್ದಾಗುತ್ತದೆ ಎಂಬ ಪ್ರಶ್ನೆಯೂ ಹರಿದಾಡಲಾರಂಭಿಸಿತ್ತು. “ಬಾಳಾ ಸಾಹೇಬ್‌ ಜಾಗವನ್ನು ತುಂಬಲು ಫೈರ್‌ ಬ್ರ್ಯಾಂಡ್‌ “ರಾಜ್‌ ಠಾಕ್ರೆ’ಯನ್ನು ಬಿಟ್ಟರೆ ಮತ್ತ್ಯಾರಿಗೆ ಸಾಧ್ಯವಿದೆ?’ ಎಂಬ ಉತ್ತರವೇ ಎದುರಾಗುತ್ತಿತ್ತು. ರಾಜ್‌ ಠಾಕ್ರೆಯಂತೂ ಮಾತಿನಲ್ಲಿ, ಗತ್ತಿನಲ್ಲಿ ಬಾಳಾ ಠಾಕ್ರೆಯನ್ನು ಎಷ್ಟು ಹೋಲುತ್ತಿದ್ದರೆಂದರೆ, ಶಿವಸೇನೆಯ ಯಾವೊಬ್ಬ ಕೇಡರ್‌ಗೂ ಕೂಡ ಮುಂದೊಂದು ದಿನ ರಾಜ್‌ ಠಾಕ್ರೆ ತಮ್ಮ ಪಕ್ಷ ತೊರೆದುಹೋಗುತ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಮಹಾರಾಷ್ಟ್ರದ ರಾಜಕೀಯ ಪರಿದೃಶ್ಯದಲ್ಲಿ ಲೆಕ್ಕಕ್ಕೇ ಇಲ್ಲದಂತಿದ್ದ, ಕ್ಯಾಮೆರಾ ಹಿಡಿದುಕೊಂಡು ತನ್ನ ಲೋಕದಲ್ಲಿ ತಾನು ಮುಳುಗಿದ್ದ ಉದ್ಧವ್‌ ಠಾಕ್ರೆ ಎಂಬ ನಾಚಿಕೆಯ ಯುವಕ ಶಿವಸೇನೆಯ ನೊಗ ಹೊರುತ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ!
“ಬಾಳಾ ಠಾಕ್ರೆಯ ನಂತರ ರಾಜ್‌ ಠಾಕ್ರೆ’ ಎಂಬ ಮಾತು ಎಷ್ಟು ಪ್ರಚಲಿತದಲ್ಲಿ ಬಂತು ಎಂದರೆ, ರಾಜ್‌ ಕೂಡ ಅದನ್ನು ಗಟ್ಟಿಯಾಗಿಯೇ ನಂಬಿದ್ದರು. ಆ ಸಮಯದಲ್ಲಷ್ಟೇ ಅಲ್ಲ, ಬಾಲ್ಯದಿಂದಲೇ ರಾಜ್‌ ಠಾಕ್ರೆ ತನ್ನ ದೊಡ್ಡಪ್ಪ ಬಾಳಾ ಠಾಕ್ರೆಯನ್ನು ಅನುಕರಿಸುತ್ತಾ, ಅನುಸರಿಸುತ್ತಾ ಬೆಳೆದವರು (ರಾಜ್‌ ಕೂಡ ಕಾಟೂìನಿಸ್ಟ್‌ ಆಗಿದ್ದವರು. ಅವರ ಧ್ವನಿಯೂ ಬಾಳಾ ಠಾಕ್ರೆಯವರನ್ನು ಹೋಲುತ್ತದೆ).
ಆ ಸಮಯದಲ್ಲಿ ರಾಜ್‌ ಠಾಕ್ರೆಗೆ ಶಿವಸೇನೆಯಲ್ಲಿ ಪ್ರತಿಸ್ಪರ್ಧಿಯೇ ಇಲ್ಲವಾಗಿತ್ತು. ಅತ್ತ, ಉದ್ಧವ್‌ ಠಾಕ್ರೆ ರಾಜಕೀಯಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ಬದುಕುತ್ತಿದ್ದರು. ಜೆಜೆ ಇನ್ಸ್‌ಟಿಟ್ಯೂಟ್‌ ಆಫ್ ಅಪ್ಲೆ„ಡ್‌ ಆರ್ಟ್ಸ್ ಕಾಲೇಜಿನಲ್ಲಿ ಪದವಿ ಪಡೆದು, ಪೂರ್ಣಾವಧಿ ಫೋಟೋಗ್ರಾಫ‌ರ್‌ ಆಗಿಯೇ ಬದುಕು ಸವೆಸುತ್ತೇನೆ ಎಂದು ನಿರ್ಧರಿಸಿದ್ದ ಉದ್ಧವ್‌ ಜಗತ್ತಿನಾದ್ಯಂತ ಭೂದೃಶ್ಯಗಳನ್ನು, ವನ್ಯ ಮೃಗಗಳನ್ನು, ಅಪ್ಪ ಬಾಳಾ ಠಾಕ್ರೆಯ ರ್ಯಾಲಿಗಳಲ್ಲಿನ ಜನಸಾಗರವನ್ನು, ರಾಜ್‌ ಠಾಕ್ರೆಯ ಆಕ್ರಮಣಶೀಲ ಭಂಗಿಗಳನ್ನು ಕ್ಯಾಮೆರಾದಲ್ಲಿ ಸೆರೆ
ಹಿಡಿಯುತ್ತ ಸಮಯ ಕಳೆಯುತ್ತಿದ್ದರು. ಆದಾಗ್ಯೂ ಅವರು 1985ರಲ್ಲಿ ಮುಂಬಯಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಶಿವಸೇನೆಯ ಪರ ಪ್ರಚಾರ ಮಾಡಿ ಪಕ್ಷಕ್ಕೆ ಗೆಲುವು ತಂದು ಕೊಟ್ಟಿದ್ದರಾದರೂ, ಸಕ್ರಿಯ ರಾಜಕಾರಣಕ್ಕೆ ಧುಮುಕಲು ಹಿಂದೇಟು ಹಾಕುತ್ತಲೇ ಬಂದರು. ಆದಾಗ್ಯೂ ಬಾಳಾ ಠಾಕ್ರೆಯವರಿಗೆ ಉದ್ಧವ್‌, ಮೂರನೆಯ ಮಗ. ಮೊದಲ ಮಗ ಬಿಂದುಮಾಧವ್‌ ಠಾಕ್ರೆ ಸಿನೆಮಾ ವಿತರಣೆ, ಪ್ರೊಡಕ್ಷನ್‌ನಲ್ಲೇ ಕಳೆದುಹೋಗಿದ್ದರು, ಎರಡನೆಯ ಮಗ ಜೈದೇವ ಠಾಕ್ರೆಗೂ ಬಾಳಾ ಠಾಕ್ರೆಗೂ ಹೊಂದಾಣಿಕೆಯೇ ಆಗುತ್ತಿರಲಿಲ್ಲ. ಹೀಗಾಗಿ ಮೂರನೆಯ ಮಗನಾದರೂ ರಾಜಕೀಯಕ್ಕೆ ಬರಬೇಕು ಎಂಬ ಇಚ್ಛೆ ಅವರಿಗೆ ಆರಂಭವಾಯಿತು ಎನ್ನಲಾಗುತ್ತದೆ.
ದಿ ಠಾಕ್ರೆ ಕಸಿನ್ಸ್‌ ಪುಸ್ತಕದ ಲೇಖಕ ಧವಲ್‌ ಕುಲ್ಕರ್ಣಿ ಉದ್ಧವ್‌ ಠಾಕ್ರೆಯವರ ರಾಜಕೀಯದ ಆರಂಭಿಕ ದಿನಗಳ ಬಗ್ಗೆ ಹೀಗೆ ಹೇಳುತ್ತಾರೆ, “”ಅದು 1991. ನಾಗಪುರದಲ್ಲಿ ನಿರುದ್ಯೋಗದ ವಿರುದ್ಧ ರಾಜ್‌ ಠಾಕ್ರೆ ನೇತೃತ್ವದಲ್ಲಿ ರ್ಯಾಲಿಯೊಂದು ಆಯೋಜಿತವಾಗಿತ್ತು. ಎಲ್ಲಾ ತಯ್ನಾರಿ ಪೂರ್ಣಗೊಂಡು, ರಾಜ್‌ ಠಾಕ್ರೆಯೊಬ್ಬರೇ ಭಾಷಣ ಮಾಡಲಿದ್ದಾರೆ ಎಂದೂ ನಿರ್ಧರಿತವಾಗಿತ್ತು. ಆದರೆ ರ್ಯಾಲಿಗೂ ಮುನ್ನಾ ದಿನ ರಾಜ್‌ ಠಾಕ್ರೆಗೆ ಮಾತೋಶ್ರಿಯಿಂದ(ಬಾಳಾ ಠಾಕ್ರೆ ನಿವಾಸ) ಒಂದು ಕರೆ ಬಂತು. “ರಾಜ್‌, ನಿನ್ನ ಜತೆಗೆ ನಿನ್ನ ಅಣ್ಣ ಉದ್ಧವ್‌ ಭಾಷಣ ಮಾಡುತ್ತಾನೆ’ ಎಂಬ ಆದೇಶ ಅತ್ತಲಿಂದ ಬಂತು! ರಾಜ್‌ ಠಾಕ್ರೆ
ಇದರಿಂದ ಕೆರಳಿ ಕೆಂಡವಾದರು…ನಂತರದಿಂದ ಉದ್ಧವ್‌ ಮತ್ತು ರಾಜ್‌ ನಡುವೆ
ಮತಭೇದ ಬೆಳೆಯುತ್ತ ಹೋಯಿತು.”
ಅಂದು ಉದ್ಧವ್‌ ಠಾಕ್ರೆ ಮಾಡಿದ್ದ ಭಾಷಣದಿಂದ ಜನರಿಗೆ ಒಂದು ಅಂಶ ಸ್ಪಷ್ಟವಾಗಿತ್ತು- ಏನೆಂದರೆ, ಉದ್ಧವ್‌ ತನ್ನ ತಂದೆ ಮತ್ತು ರಾಜ್‌ ಠಾಕ್ರೆಗಿಂತ ಸಂಪೂರ್ಣ ಭಿನ್ನ ವ್ಯಕ್ತಿತ್ವ ಹೊಂದಿದ್ದಾರೆ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಬಾಳಾ ಠಾಕ್ರೆ ಅಥವಾ ರಾಜ್‌ರಂಥ ಫೈಯರ್‌ ಬ್ರ್ಯಾಂಡ್‌ ಅಲ್ಲ ಹಾಗೂ ಅವರಿಬ್ಬರಲ್ಲಿರುವಂಥ ಭಾಷಾ ಪಾಂಡಿತ್ಯವಾಗಲಿ, ಹಾಸ್ಯಪ್ರಜ್ಞೆಯಾಗಲಿ, ಸಾಮಾಜಿಕ-ರಾಜಕೀಯದ ವಿಷಯದಲ್ಲಿ ಆಳವಾಗಲಿ ಇಲ್ಲ ಎನ್ನುವುದು!
1995-96ರ ನಡುವಿನ ಕೆಲ ಘಟನಾವಳಿಗಳು ಶಿವಸೇನೆಯ ದಿಕ್ಕು ಬದಲಾಗಲು ಕಾರಣವಾದವು. 1995ರವರೆಗೂ ಬಾಳಾ ಠಾಕ್ರೆಯವರ ಜತೆಯೇ ವಾಸಿಸುತ್ತಿದ್ದ ಅವರ ಎರಡನೆಯ ಮಗ ಜೈದೇವ್‌ ಠಾಕ್ರೆ, ಅದೇ ವರ್ಷ ತಮ್ಮ ಪತ್ನಿ ಸ್ಮಿತಾಗೆ ವಿಚ್ಛೇದನ ನೀಡಿ, ಮತ್ತೂಂದು ಮದುವೆಯಾಗಿ, ಮನೆ ತೊರೆದುಬಿಟ್ಟರು. ಈ ಘಟನೆಯಿಂದಾಗಿ ಬಾಳಾ ಠಾಕ್ರೆ ಬಹಳ ಆಘಾತಕ್ಕೀಡಾದರು ಮತ್ತು ಜೈದೇವ್‌ರ ಬಗ್ಗೆ ಅವರಿಗಿದ್ದ ಅಸಮಾಧಾನ ವಿಪರೀತವಾಗಿ, ಅವರೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟರು. ಇನ್ನು ಅದೇ ವರ್ಷವೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ-ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು ಹಾಗೂ ಅದೇ ವರ್ಷ ಬಾಳಾ ಠಾಕ್ರೆಯವರ ಮಡದಿ ಮೀನಾ ಮೃತಪಟ್ಟರು!
ಇದು ಸಾಲದೆಂಬಂತೆ, ಮರು ವರ್ಷವೇ, ಅಂದರೆ, 1996ರಲ್ಲಿ ಬಾಳಾ ಠಾಕ್ರೆಯವರ ಹಿರಿಯ ಮಗ ಬಿಂದುಮಾಧವ ರಸ್ತೆ ಅಪಘಾತವೊಂದರಲ್ಲಿ ಅಕಾಲ ಮೃತ್ಯುವಿಗೀಡಾದರು! ಈ ಘಟನೆಯ ನಂತರವಂತೂ ಬಾಳಾ ಠಾಕ್ರೆ ಕುಸಿದುಬಿಟ್ಟರು. ಪರಿವಾರಕ್ಕೆ ಬಂದ ಈ ವಿಪತ್ತಿನ ಸಮಯದಲ್ಲಿ ಅಪ್ಪನಿಗೆ ಸಮಾಧಾನ ಹೇಳಲು ಜೈದೇವ ಠಾಕ್ರೆ ಕೂಡ ಮನೆಗೆ ಬಂದರು. ಬಾಳಾ ಠಾಕ್ರೆ ಕೂಡ ಜೈದೇವರನ್ನು ಕ್ಷಮಿಸಿ, ಇನ್ಮುಂದೆ ಇವನೂ ನಮ್ಮ ಜತೆಗಿರುತ್ತಾನೆ ಎಂದೇ ಭಾವಿಸಿದರು. ಆದರೆ ಕೆಲವೇ ದಿನಗಳಲ್ಲಿ ಜೈದೇವ, ಮತ್ತೆ ಮನೆ ಬಿಟ್ಟು ಹೋಗಿಬಿಟ್ಟರು. ಆ ನೋವಿನ ಸಮಯದಲ್ಲಿ ಬಾಳಾ ಠಾಕ್ರೆಗೆ ಹೆಗಲಾದ ಏಕೈಕ ವ್ಯಕ್ತಿ ಉದ್ಧವ್‌ ಠಾಕ್ರೆ. ಆ ಸಮಯದಲ್ಲಿ ರಾಜ್‌ ಠಾಕ್ರೆಗೂ ಬಾಳಾ ಠಾಕ್ರೆ ಜತೆ ನಿಲ್ಲಲಾಗಲಿಲ್ಲ. ಏಕೆಂದರೆ, ಅದೇ ವರ್ಷವೇ ಪುಣೆಯಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ರಾಜ್‌ ಠಾಕ್ರೆ ಹೆಸರು ತಳಕು ಹಾಕಿಕೊಂಡುಬಿಟ್ಟಿತ್ತು!
ಆಗ ರಮೇಶ್‌ ಕಿಣಿ ಎನ್ನುವವರ ಹತ್ಯೆಯ ಪ್ರಕರಣದಲ್ಲಿ ರಾಜ್‌ ಠಾಕ್ರೆಯವರ ಹೆಸರು ಕೇಳಿಬಂದಿತ್ತು. ಸೆಂಟ್ರಲ್‌ ಮುಂಬೈಯಿಯ ನಿವಾಸಿಯಾಗಿದ್ದ ರಮೇಶ್‌ ಕಿಣಿಯವರ ದೇಹವು ಪುಣೆ ಥಿಯೇಟರ್‌ನಲ್ಲಿ ಸಿಕ್ಕಿತ್ತು. “”ನನ್ನ ಪತಿಯ ಸಾವಿಗೆ ರಾಜ್‌ ಠಾಕ್ರೆ ಮತ್ತವರ ಗೆಳೆಯರೇ ಕಾರಣ. ಏಕೆಂದರೆ, ನಾವಿರುವ ಮನೆಯನ್ನು ಖಾಲಿ ಮಾಡಿಸಲು ರಾಜ್‌ ಠಾಕೆಯ ಗೆಳೆಯ ಪ್ರಯತ್ನಿಸುತ್ತಿದ್ದ, ನಾವು ಅದಕ್ಕೆ ಒಪ್ಪಿರಲಿಲ್ಲ. ರಾಜ್‌ ಠಾಕ್ರೆ ನನ್ನ ಮನೆಯವರನ್ನು ಅನೇಕ ಬಾರಿ ಕಚೇರಿಗೆ ಕರೆಸಿಕೊಂಡು ಎಚ್ಚರಿಕೆ ನೀಡಿದ್ದರು’ ಎಂದು ರಮೇಶ್‌ ಕಿಣಿಯ ಪತ್ನಿ ಆರೋಪಿಸಿದ್ದರು.
ಈ ಸಮಯದಲ್ಲಿ ಬಿಜೆಪಿ- ಶಿವಸೇನೆಯ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಒಂದು ವರ್ಷವಾಗಿತ್ತು. ರಾಜ್‌ ಠಾಕ್ರೆ ವಿರುದ್ಧದ ಈ ಪ್ರಕರಣವು ಶಿವಸೇನೆ-ಬಿಜೆಪಿ ಸರ್ಕಾರವನ್ನು ಅಲುಗಾಡಿಸಿದ್ದು ಸುಳ್ಳಲ್ಲ. ಮೊದಲೇ ವೈಯಕ್ತಿಕ ಬದುಕಿನಲ್ಲಾದ ಹಾನಿಯಿಂದ ತತ್ತರಿಸಿದ್ದ ಬಾಳಾ ಠಾಕ್ರೆ ಇದರಿಂದ ಕೆರಳಿ ಕೆಂಡವಾದರು. ಈ ಪ್ರಕರಣದಿಂದ ರಾಜ್‌ ಠಾಕ್ರೆ ದೋಷಮುಕ್ತರಾದದ್ದು ನಿಜವೇ ಆದರೂ, ನಂತರದ ಕೆಲವು ವರ್ಷಗಳಲ್ಲಿ ಅವರು ರಾಜಕೀಯವಾಗಿ ತಣ್ಣಗಾಗಿಬಿಟ್ಟರು(ರಾಜ್‌ ಠಾಕ್ರೆಯವರನ್ನು ಖುಲಾಸೆಗೊಳಿಸಲು ಬಾಳಾ ಠಾಕ್ರೆ ಬಹಳ ಶ್ರಮಪಟ್ಟರು ಎನ್ನಲಾಗುತ್ತದೆ). ಈ ಪ್ರಕರಣವನ್ನೇ ನೆಪವಾಗಿಟ್ಟುಕೊಂಡ ಪಕ್ಷದಲ್ಲಿನ ಕೆಲವರು, ಉದ್ಧವ್‌ರನ್ನು ಶಿವಸೇನೆಯಲ್ಲಿ ಮುಂದೆ ತರಬೇಕೆಂದು ಬಾಳಾ ಠಾಕ್ರೆಯವರಿಗೆ ಸಲಹೆ ನೀಡಲಾರಂಭಿಸಿದರು. ಇತ್ತ ಉದ್ಧವ್‌ ಠಾಕ್ರೆಯವರ ಪತ್ನಿ ರಶ್ಮಿಯವರೂ ಕೂಡ ತಮ್ಮ ಪತಿಗೆ ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗುವಂತೆ ಒತ್ತಾಯಿಸಿದರು ಎನ್ನಲಾಗುತ್ತದೆ.
ಪರಿಣಾಮವಾಗಿ ಮರುವರ್ಷದಿಂದಲೇ, ಅಂದರೆ 1997ರ ಮುಂಬಯಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಉದ್ಧವ್‌ ಠಾಕ್ರೆ ಸಕ್ರಿಯ ಪಾತ್ರ ವಹಿಸಿದರು. ತದನಂತರ 2002ರಲ್ಲಿ ನಡೆದ ಮಹಾನಗರ ಪಾಲಿಕೆಯ ಚುನಾವಣೆಯ ಪೂರ್ಣ ಜವಾಬ್ದಾರಿಯನ್ನೂ ಉದ್ಧವ್‌ರಿಗೇ ಕೊಡಲಾಯಿತು. ಆ ಸಮಯದಲ್ಲೇ ಉದ್ಧವ್‌ ಠಾಕ್ರೆಯೇ ಬಾಳಾಠಾಕ್ರೆಯ ಉತ್ತರಾಧಿಕಾರಿ ಆಗುತ್ತಾರೆ ಎನ್ನುವುದಕ್ಕೆ ಸುಳಿವು ಸಿಗಲಾರಂಭಿಸಿತ್ತು. ಈ ಸುಳಿವು ರಾಜ್‌ ಠಾಕ್ರೆಗೂ ಸಿಕ್ಕಿತ್ತು. ಏಕೆಂದರೆ 2002ರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ರಾಜ್‌ ಠಾಕ್ರೆಬೆಂಬಲಿಗರನ್ನೆಲ್ಲ ಶಿವಸೇನೆ ಮೂಲೆಗುಂಪಾಗಿಸಿತ್ತು. ಆದರೂ ರಾಜ್‌ ಠಾಕ್ರೆ, ದೊಡ್ಡಪ್ಪ ಬಾಳಾ ಸಾಹೇಬ್‌ ಮೇಲಿನ ಗೌರವದಿಂದ ಸುಮ್ಮನೇ ಇದ್ದರು.
ಶಿವಸೇನೆಯಲ್ಲಿ ನಿಜಕ್ಕೂ ಗೇಮ್‌ ಚೇಂಜ್‌ ಆಗಿದ್ದು 2003ರಲ್ಲಿ ಮಹಾಬಳೇಶ್ವರದಲ್ಲಿ ನಡೆದ ಪಕ್ಷದ ಸಮ್ಮೇಳನದಲ್ಲಿ. ಸಮ್ಮೇಳನದ ಕೊನೆಯ ದಿನ ಬಾಳಾ ಠಾಕ್ರೆ ಅನುಪಸ್ಥಿತಿಯಲ್ಲಿ ಉದ್ಧವ್‌ ಠಾಕ್ರೆಯವರ ಹೆಸರನ್ನು “ಕಾರ್ಯಕಾರಿ ಅಧ್ಯಕ್ಷ’ರನ್ನಾಗಿ ಘೋಷಿಸಲಾಯಿತು. ಗಮನಿಸಬೇಕಾದ ಅಂಶವೆಂದರೆ, ಅದಕ್ಕಿಂತ ಮುಂಚೆ ಅಂಥದ್ದೊಂದು ಹುದ್ದೆಯೇ ಶಿವಸೇನೆಯಲ್ಲಿ ಇರಲಿಲ್ಲ! ಹೆಚ್ಚು ಚಕಿತಗೊಳಿಸುವ ಸಂಗತಿಯೆಂದರೆ, ಉದ್ಧವ್‌ರ ಹೆಸರನ್ನು ಘೋಷಿಸುವ ಜವಾಬ್ದಾರಿಯನ್ನು ಬಾಳಾ ಠಾಕ್ರೆಯವರು ವಹಿಸಿದ್ದು ರಾಜ್‌ ಠಾಕ್ರೆಗೆ! (ಲಕ್ಷಾಂತರ ಕಾರ್ಯಕರ್ತರ ಸಮ್ಮುಖದಲ್ಲಿ ರಾಜ್‌ ಠಾಕ್ರೆ ಉದ್ಧವ್‌ರ ಹೆಸರನ್ನು ಘೋಷಿಸುವ ಮೂಲಕ ತಮ್ಮ ನಡುವೆ ವೈಮನಸ್ಯವಿಲ್ಲ ಎನ್ನುವುದನ್ನು ರುಜುವಾತು ಮಾಡಬೇಕಿತ್ತು!) ದೊಡ್ಡಪ್ಪನ ಮಾತಿಗೆ ಮರುಮಾತನಾಡದ ರಾಜ್‌ ಠಾಕ್ರೆ, ಉದ್ಧವ್‌ರ ಹೆಸರನ್ನು ಘೋಷಿಸಿದರಾದರೂ, ಅವರಿಗೆ ಉದ್ಧವ್‌ ಮೇಲಿನ ಮುನಿಸು ದುಪ್ಪಟ್ಟಾಯಿತು.
ಆರಂಭಿಕ ಸಮಯದಲ್ಲಿ ಪಕ್ಷದಲ್ಲಿ ಹೊಂದಿಕೊಳ್ಳಲು ಉದ್ಧವ್‌ ಹೆಣಗಾಡಲಾರಂಭಿಸಿದರೂ ಕೆಲವೇ ದಿನಗಳಲ್ಲೇ ರಾಜಕೀಯ ಪಟ್ಟುಗಳನ್ನು ಕಲಿಯತೊಡಗಿದರು, ಉತ್ತಮ ಭಾಷಣಕಾರನಾಗದಿದ್ದರೂ, ಉತ್ತಮ ಆಡಳಿತಗಾರನ ಗುಣಗಳು ಅವರಲ್ಲಿದ್ದವು. ನಿಧಾನಕ್ಕೆ ಅವರು ಪಕ್ಷವನ್ನು ಮರುಸಂಘಟಿಸಲಾರಂಭಿಸಿದರು, ತಮಗೆ ಬೇಕಾದವರನ್ನು ಪ್ರಮುಖ ಸ್ಥಾನಗಳಲ್ಲಿ ತಂದು ಕೂರಿಸಲಾರಂಭಿಸಿದರು, ಶಿವಸೇನೆಯನ್ನು ಕೇವಲ ಮರಾಠಿ ಜನರಿಗಷ್ಟೇ ಸೀಮಿತವಾಗಿಸದೇ ಎಲ್ಲರ ಬಳಿ ಕೊಂಡೊಯ್ಯುವ ಮಾತನಾಡಲಾರಂಭಿಸಿದರು, ಮಾಧ್ಯಮಗಳ ಎದುರು ಪಕ್ಷದ ಪಾಲಿಸಿಗಳನ್ನು ವಿವರಿಸತೊಡಗಿದರು.
ಒಟ್ಟಲ್ಲಿ ಉದ್ಧವ್‌ ನಿಧಾನಕ್ಕೆ ಪಕ್ಷದ ಕಾರ್ಯವೈಖರಿ ಮತ್ತು ಚಹರೆಯನ್ನೇ ಬದಲಿಸುತ್ತಾ ಹೋದರು. ಆದರೆ ಈ ಬದಲಾವಣೆಗಳಿಗೆಲ್ಲ ಪಕ್ಷದಲ್ಲಿನ ಹಿರಿಯ ನಾಯಕರಿಗೆ ಹೊಂದಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಅಷ್ಟರಲ್ಲಾಗಲೇ ಪಕ್ಷದಲ್ಲಿ ಮೂಲೆಗುಂಪಾಗಿದ್ದ ಪ್ರಮುಖ ನಾಯಕ ನಾರಾಯಣ ರಾಣೆ, ಉದ್ಧವ್‌ರ ಕಾರ್ಯವೈಖರಿಯನ್ನು ದೂಷಿಸುತ್ತಾ ಶಿವಸೇನೆಯಿಂದ ಹೊರನಡೆದುಬಿಟ್ಟರು. ಹೊರ ಹೋಗಿದ್ದಷ್ಟೇ ಅಲ್ಲದೇ, ತಮ್ಮೊಂದಿಗೆ 13 ಸಚಿವರನ್ನೂ ಕೊಂಡೊಯ್ದರು! ತದನಂತರ ನಡೆದ ಉಪಚುನಾವಣೆಯಲ್ಲಿ ರಾಣೆಯೊಂದಿಗಿದ್ದ 13 ನಾಯಕರಲ್ಲಿ ಹತ್ತು ಮಂದಿ ಗೆದ್ದುಬಿಟ್ಟರು. ಇದಾದ 7 ತಿಂಗಳಲ್ಲೇ ರಾಜ್‌ ಠಾಕ್ರೆಯೂ ಬಹಿರಂಗವಾಗಿಯೇ ಶಿವಸೇನೆಯ ಮೇಲೆ ಮುನಿಸು ತೋರಿಸಿ ಪಕ್ಷದಿಂದ ಹೊರನಡೆದು, ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ಸ್ಥಾಪಿಸಿದರು.
ಪಕ್ಷದಿಂದ ಹೊರಬಿದ್ದ ರಾಜ್‌ ಠಾಕ್ರೆ ಜೋರಾಗಿಯೇ ಮರಾಠಾ ಮಾನುಸ್‌ ಮಂತ್ರವನ್ನು ಜಪಿಸುತ್ತಾ ಶಿವಸೇನೆಯ ವಿರುದ್ಧ ಪರೋಕ್ಷ ಸಮರ ಸಾರಿದರು. 2006ರಿಂದ-2009ರವರೆಗೆ ಶಿವಸೇನೆ ವರ್ಸಸ್‌ ರಾಜ್‌ ಠಾಕ್ರೆ ಗದ್ದಲದ ಪರಿಣಾಮವು 2009ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿತು. ಶಿವಸೇನೆಯ ಈ ಒದ್ದಾಟದ ಫ‌ಲವಾಗಿ, ಮತ್ತೆ ಕಾಂಗ್ರೆಸ್‌-ಎನ್‌ಸಿಪಿ ಜೋಡಿಯು ಅನಾಯಾಸವಾಗಿ ಗೆದ್ದು, ಅಧಿಕಾರವನ್ನು ಉಳಿಸಿಕೊಂಡಿತು. 2009ರ ನಂತರ ಉದ್ಧವ್‌ ಪಕ್ಷವನ್ನು ಗಟ್ಟಿಗೊಳಿಸಲು ಆರಂಭಿಸಿದರು, ಪಕ್ಷದೊಳಗಿನ ಅಸಮಾಧಾನಗಳನ್ನೆಲ್ಲ ಬಗೆಹರಿಸಿದರು. ಶಿವಸೇನೆ ಚೇತರಿಸಿಕೊಳ್ಳಲಾರಂಭಿಸಿತು.
17 ನವೆಂಬರ್‌, 2012. ಶಿವಸೇನೆಗೆ ಬಹುದೊಡ್ಡ ಹೊಡೆತ ಬಿದ್ದ ದಿನವಿದು. ಶಿವಸೇನೆ ಸ್ಥಾಪಕ ಬಾಳಾ ಸಾಹೇಬ್‌ ಠಾಕ್ರೆಯವರು, ಹೃದಯಾಘಾತದಿಂದ ನಿಧನರಾದರು.
ಉದ್ಧವ್‌ ಠಾಕ್ರೆ, ಆಗ ಏಕಾಂಗಿಯಾದರಾದರೂ, ಜನರ ಅನುಕಂಪದ ಬೃಹತ್‌ ಬೆಂಬಲ ಅವರಿಗೆ ದಕ್ಕಿತ್ತು. ಅಲ್ಲಿಯವರೆಗೂ ಪಕ್ಷದಲ್ಲಿ ನಿಜವಾದ ಮಾಸ್ಟರ್‌ ಯಾರೂ ಎನ್ನುವ ವಿಚಾರದಲ್ಲಿ ಶಿವಸೈನಿಕರಿಗೂ ಗೊಂದಲವಿದ್ದೇ ಇತ್ತು. ಆದಾಗ್ಯೂ 2012ರ ಫೆಬ್ರವರಿಯಲ್ಲಿ ನ‚ಡೆದ ಬೃಹನ್‌ ಮುಂಬೈ ಮಹಾನಗರಪಾಲಿಕೆ ಚುನಾವಣೆಯಲ್ಲಿ ಶಿವಸೇನೆಯು ಭರ್ಜರಿ ಗೆಲುವು ಸಾಧಿಸಿತ್ತಾದರೂ, ಜನರು ಈ ಗೆಲುವಿನ ಸಂಪೂರ್ಣ ಕ್ರೆಡಿಟ್‌ ಅನ್ನು ಉದ್ಧವ್‌ಗೆ ಕೊಟ್ಟಿರಲಿಲ್ಲ. ಆದರೆ ಬಾಳಾ ಠಾಕ್ರೆಯ ನಿಧನಾ ನಂತರದ ದಿನಗಳಲ್ಲಿ ಚಿತ್ರಣ ಸಂಪೂರ್ಣ ಬದಲಾಯಿತು. ಉದ್ಧವ್‌ರ ನಾಯಕತ್ವದ ಬಗ್ಗೆ ಪಕ್ಷದಲ್ಲಿ ಸಕಾರಾತ್ಮಕ ಭಾವನೆ ಸೃಷ್ಟಿಯಾಗಲಾರಂಭಿಸಿತು…ಇನ್ನೇನು ಮಹಾರಾಷ್ಟ್ರದಲ್ಲಿ ಉದ್ಧವ್‌ರದ್ದೇ ನಾಯಕತ್ವ ಎಂಬಂಥ ವಾತಾವರಣ ಸೃಷ್ಟಿಯಾಗುತ್ತಿರುವ ವೇಳೆಯಲ್ಲೇ ಎದುರಾಯಿತು, 2014ರ ಲೋಕಸಭಾ ಚುನಾವಣೆ!
2014ರ ಲೋಕಸಭಾ ಚುನಾವಣೆಯ ನಂತರ ಮಹಾರಾಷ್ಟ್ರ ರಾಜಕಾರಣದ ಚಿತ್ರಣವೇ ಸಂಪೂರ್ಣ ಬದಲಾಯಿತು. ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯ ದಿಗ್ವಿಜಯ, ತದನಂತರದ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿಯ ಅದ್ಭುತ ಸಾಧನೆಯ ಹಿಂದೆ ಕೆಲಸ ಮಾಡಿದ ಮೋದಿ ಅಲೆಯ ಮುಂದೆ ಉದ್ಧವ್‌ ಠಾಕ್ರೆಯ ಹೊಸ ಇಮೇಜು ಮುಚ್ಚಿಹೋಗಿದ್ದು ಸುಳ್ಳಲ್ಲ!
2014ರಿಂದ ಶಿವಸೇನೆ ಅಕ್ಷರಶಃ ಬಿಜೆಪಿಯ ಬಿ-ಟೀಂ ಆಗಿ ಬದಲಾಗಿಬಿಟ್ಟಿತು! ಆಗಷ್ಟೇ ರಾಜಕೀಯದಲ್ಲಿ ತಮ್ಮ ಛಾಪನ್ನು ಮೂಡಿಸಲಾರಂಭಿಸಿದ್ದ ಉದ್ಧವ್‌ ಠಾಕ್ರೆ ಅವರಿಗೆ ದೇವೇಂದ್ರ ಫ‌ಡ್ನವೀಸ್‌ರ ಜನಪ್ರಿಯತೆಯು ಹೊಸ ಸಾವಾಲಾಗಿ ಪರಿಣಮಿಸಿತು.
ಅವೆಲ್ಲದರ ಪರಿಣಾಮವನ್ನೇ ನಾವೀಗ ನೋಡುತ್ತಿದ್ದೇವೆ…
ಅಧಿಕಾರದಾಸೆಯು ಉದ್ಧವ್‌ರನ್ನು ಹಿಂದುತ್ವ ತೊರೆದು ಎನ್‌ಸಿಪಿ ಜತೆ ಸೇರುವಂತೆ ಮಾಡಿದೆ ಎನ್ನುವುದು ನಿಜ. ಆದರೆ, ಇದೇ ವೇಳೆಯಲ್ಲೇ ಹಿಂದುತ್ವದ ವಿಷಯ ಬಂದಾಗ, ತನಗೆ ಬಿಜೆಪಿಯನ್ನು ಮೀರಿಸಲು ಸಾಧ್ಯವೇ ಆಗದು ಎನ್ನುವುದು ಉದ್ಧವ್‌ರಿಗೆ ಸ್ಪಷ್ಟವಾಗಿ ಅರಿವಾಗಿದೆ. ಈ ಕಾರಣಕ್ಕಾಗಿಯೇ, ಉದ್ಧವ್‌ ಈಗ ಹಿಂದುತ್ವದ ಕೈಬಿಟ್ಟು, ಮತ್ತೆ ಮರಾಠಾ ಅಸ್ಮಿತೆಯ ರಾಜಕಾರಣದತ್ತ ವಾಲಲು ಮುಂದಾಗಿದ್ದಾರೆ ಎಂದೂ ಹೇಳಲಾಗುತ್ತದೆ.
ಶಿವಸೇನೆಯ ಪ್ರಮುಖ ಅಜೆಂಡಾ ಆಗಿದ್ದ ಮರಾಠಾ ಅಸ್ಮಿತೆಯೊಂದೇ ಭವಿಷ್ಯದಲ್ಲಿ ಶಿವಸೇನೆಯ ಕೈ ಹಿಡಿಯಬಹುದು ಎನ್ನಲಾಗುತ್ತದೆ. ಆದರೆ, ಎನ್‌ಸಿಪಿ-ಕಾಂಗ್ರೆಸ್‌ ಜೊತೆಗಿನ ಈ ಅತಂತ್ರ ಮೈತ್ರಿಯು ಉದ್ಧವ್‌ರ ಈ ಕನಸಿಗೆ ಸಹಕರಿಸಲಿದೆಯೇ ಎಂಬುದೇ ಮುಖ್ಯ ಪ್ರಶ್ನೆ. ಒಟ್ಟಲ್ಲಿ ಉದ್ಧವ್‌ ಅಂತೂ ಬಹಳ ದೊಡ್ಡ ರಿಸ್ಕ್ ಅನ್ನೇ ತೆಗೆದುಕೊಂಡಿದ್ದಾರೆ…
ಇಲ್ಲಿ ಒಂದು ಘಟನೆಯನ್ನು ಹೇಳಲೇಬೇಕು. 90ರ ದಶಕದಲ್ಲಿ ರಾಜ್‌ ಠಾಕ್ರೆ ನಿಯಮಿತವಾಗಿ ಬ್ಯಾಡ್ಮಿಂಟನ್‌ ಆಡಲು ದಾದರ್‌ಗೆ ಹೋಗುತ್ತಿದ್ದರಂತೆ. ಬ್ಯಾಡ್ಮಿಂಟನ್‌ನಲ್ಲಿ ಪಳಗಿ ಫಿಟ್‌ ಆಗಿದ್ದ ರಾಜ್‌, ನಂತರದಲ್ಲಿ ಉದ್ಧವ್‌ರನ್ನೂ ಆಟವಾಡಲು ಜತೆಗೆ ಕರೆದೊಯ್ಯಲಾರಂಭಿಸಿದರಂತೆ. ಒಂದು ದಿನ ಆಟವಾಡುತ್ತಿರುವಾಗ ಉದ್ಧವ್‌ ಠಾಕ್ರೆ ರಾಜ್‌ ಹೊಡೆದ ಶಟಲ್‌ ಅನ್ನು ಹಿಂದಿರುಗಿಸಲು ಹೋಗಿ ಎಡವಿ ಬಿದ್ದರಂತೆ. ಇದನ್ನು ನೋಡಿದ ರಾಜ್‌ ಮತ್ತು ಅವರ ಗೆಳೆಯರು ಬಿದ್ದೂ ಬಿದ್ದು ನಕ್ಕರಂತೆ. ಈ ಘಟನೆಯ ನಂತರ ಉದ್ಧವ್‌ ಅಲ್ಲಿಗೆ ಹೋಗುವುದನ್ನೇ ಬಿಟ್ಟುಬಿಟ್ಟರಂತೆ!
ಬಹುಶಃ ಉದ್ಧವ್‌ ಅವಮಾನದಿಂದಾಗಿ ಬ್ಯಾಡ್ಮಿಂಟನ್‌ ಆಡುವುದನ್ನೇ ಬಿಟ್ಟುಬಿಟ್ಟಿರಬೇಕು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಉದ್ಧವ್‌ ಪ್ರಾಕ್ಟೀಸ್‌ ಮಾಡುವುದಕ್ಕೆ ಬೇರೆಯದ್ದೇ ಬ್ಯಾಡ್ಮಿಂಟನ್‌ ಕೋರ್ಟ್‌ ಬುಕ್‌ ಮಾಡಿದ್ದರು! ಅಷ್ಟೇ ಅಲ್ಲದೇ, ರಾಜ್‌ ಠಾಕ್ರೆಗೆ ಕಲಿಸಿಕೊಡುತ್ತಿದ್ದ ಕೋಚ್‌ರನ್ನೇ ತಮ್ಮ ಕೋಚಿಂಗ್‌ಗೂ ಕರೆಸಿಕೊಂಡಿದ್ದರು. ಕೆಲವೇ ದಿನಗಳಲ್ಲಿ ಉದ್ಧವ್‌ರ ಆಟದಲ್ಲಿ ಎಷ್ಟು ಸುಧಾರಣೆ ಕಂಡುಬಂದಿತೆಂದರೆ, ಒಬ್ಬ ಅನುಭವಿ ಆಟಗಾರನಿಗೂ ಬೆವರಿಳಿಸುವಂಥ ಆಟಗಾರನಾದರು ಎಂದು ಅವರ ಕೋಚ್‌
ಹೇಳುತ್ತಾರೆ.
ಈಗ ರಾಜಕೀಯ ಕೋರ್ಟ್‌ನಲ್ಲೂ ಹೊಸ ಮೈದಾನಕ್ಕೆ ತೆರಳಿದ್ದಾರೆ ಉದ್ಧವ್‌. ಹೊಸ ಕೋರ್ಟ್‌ನಲ್ಲಿ ಅವರು ಸದೃಢ ರಾಜಕಾರಣಿಯಾಗಿ ಪಳಗುತ್ತಾರೋ ಅಥವಾ ಹೊರಬಿದ್ದು ರಾಜ್‌ ಠಾಕ್ರೆಯವರಂತೆ ಏಕಾಂಗಿಯಾಗಿ ಹೋಗುತ್ತಾರೋ ನೋಡಬೇಕಿದೆ. ಏಕೆಂದರೆ, ಪವಾರ್‌ ಉದ್ಧವ್‌ರನ್ನು ಅದ್ಭುತ ಆಟಗಾರನನ್ನಾಗಿ ಮಾಡಬಲ್ಲ ಕೋಚ್‌ ಅಲ್ಲವಲ್ಲ!
 ಆಚಾರ್ಯ

Tuesday, April 7, 2020

ತಲೇಲಿ ಹೇನಿದೆ…

health tips for removing the dandruff in the head


ಶಾಲೆಗೆ ಹೋಗುವ ಹೆಣ್ಣುಮಕ್ಕಳ ತಲೆಯಲ್ಲಿ ಹೇನು ಇರುವುದು ಸಾಮಾನ್ಯ. ಅದರಿಂದ ಅವರಿಗೆ ತಲೆ ತುರಿಕೆಯಾದರೆ, ಅವರಮ್ಮನಿಗೆ ತಲೆನೋವು. ಮಗಳ ಕೂದಲು ಕತ್ತರಿಸಲೂ ಮನಸ್ಸು ಬರುವುದಿಲ್ಲ. ಹೇನುಗಳ ಕಾಟವನ್ನೂ ತಡೆಯಲಾಗುವುದಿಲ್ಲ. ಮಗಳ ತಲೆಯಿಂದ ತನ್ನ ತಲೆಗೆ ಹೇನು ದಾಟಿ ಬಿಟ್ಟರೆ ಅನ್ನುವ ಆತಂಕ ಬೇರೆ. ಆಗ ಏನು ಮಾಡಬಹುದು?
-ಬೇವಿನ ಸೊಪ್ಪನ್ನು ರುಬ್ಬಿ, ಒಂದು ಚಮಚ ಬಾದಾಮಿ ಎಣ್ಣೆ ಬೆರೆಸಿ, ಹೇರ್‌ಪ್ಯಾಕ್‌ ಹಾಕಿ. ಅರ್ಧ ಗಂಟೆ ನಂತರ ತಲೆ ತೊಳೆದು, ಕೂದಲು ಹಸಿಯಿರುವಾಗಲೇ ಸಣ್ಣ ಹಲ್ಲಿನ ಬಾಚಣಿಗೆಯಿಂದ ತಲೆ ಬಾಚಿ.
-ಶುಂಠಿಯ ರಸಕ್ಕೆ, ಒಂದು ಚಮಚ ಲಿಂಬೆ ರಸ ಬೆರೆಸಿ, ಕೂದಲಿನ ಬುಡಕ್ಕೆ ಹಚ್ಚಿ, ಸ್ನಾನ ಮಾಡಿ.
-ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ, ಅದರಲ್ಲಿ ಅರ್ಧ ತುಣುಕು ಕರ್ಪೂರವನ್ನು ಕರಗಿಸಿ, ತಲೆಗೆ ಹಚ್ಚಿ ಸ್ನಾನ ಮಾಡಿ.
-ತುಳಸಿ ಎಲೆಯ ರಸಕ್ಕೆ, ಕೊಬ್ಬರಿ ಎಣ್ಣೆ ಮತ್ತು ಲಿಂಬೆ ರಸವನ್ನು ಬೆರೆಸಿ, ತಲೆಗೆ ಹಚ್ಚಿ, ಸ್ವಲ್ಪ ಸಮಯದ ನಂತರ ಕೂದಲನ್ನು ಬಾಚಿ. ಆನಂತರ, ತಲೆಗೆ ಸ್ನಾನ ಮಾಡಿ.
-ಹುಳಿ ಮೊಸರಿಗೆ, ಲಿಂಬೆ ರಸ ಬೆರೆಸಿ, ಹೇರ್‌ಪ್ಯಾಕ್‌ ಹಾಕಿಕೊಳ್ಳಿ.
-ಹಾಗಲಕಾಯಿಯನ್ನು ರುಬ್ಬಿ, ಆ ರಸವನ್ನು ಕೂದಲಿನ ಬುಡಕ್ಕೆ ಲೇಪಿಸಿದರೆ ಹೇನು, ಸೀರು ನಿವಾರಣೆಯಾಗುತ್ತದೆ.
-ವಾರಕ್ಕೆರಡು ಬಾರಿ ಕೂದಲಿನ ಬುಡಕ್ಕೆ ಈರುಳ್ಳಿ ರಸ ಹಚ್ಚಿ ಸ್ನಾನ ಮಾಡಿದರೆ, ಹೇನು ಸಾಯುತ್ತದೆ.
-ಬೇವಿನ ಎಣ್ಣೆಯನ್ನು ತಲೆಗೆ ಹಚ್ಚಿ, ಸ್ನಾನ ಮಾಡಿ.
-ತಲೆ ಸ್ನಾನದ ನಂತರ ಕೂದಲು ಒದ್ದೆಯಿರುವಾಗಲೇ, ಬಾಚಿದರೆ ಹೇನುಗಳು ಸುಲಭವಾಗಿ ಉದುರುತ್ತವೆ.
-ಪ್ರತಿದಿನ ಶಾಲೆಯಿಂದ ಬಂದಕೂಡಲೇ, ಮಗುವಿನ ತಲೆ ಬಾಚಿ.
-ಮಕ್ಕಳ ಬಟ್ಟೆಯನ್ನು ದೊಡ್ಡವರ ಬಟ್ಟೆಯೊಂದಿಗೆ ಸೇರಿಸಬೇಡಿ.
-ವಾರಕ್ಕೆರಡು ಬಾರಿ ಮಕ್ಕಳಿಗೆ ತಲೆ ಸ್ನಾನ ಮಾಡಿಸಿ.

ಸ್ವರ್ಗದಲ್ಲಿ ಮದುವೆ

marriages are made in heaven



ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಎಂಬ ನಂಬಿಕೆ ಹಿಂದಿನವರದ್ದು. ಸ್ವರ್ಗಕ್ಕೇ ಕಿಚ್ಚು ಹಚ್ಚುವಷ್ಟು ಅದ್ಧೂರಿಯಾಗಿ ಮದುವೆ ನಡೆಯಬೇಕೆಂಬ ಬಯಕೆ ಇಂದಿನವರದ್ದು. ಊರಿನವರೆಲ್ಲಾ ಒಟ್ಟಾಗಿ ಸೇರಿ ಮದುವೆ ನಡೆಸಿ ಕೊಡುತ್ತಿದ್ದುದು ಆ ಕಾಲದ ಹಿರಿಮೆಯಾದರೆ, ಹಪ್ಪಳ- ಸಂಡಿಗೆ ಮಾಡುವುದನ್ನೂ ಕೇಟರಿಂಗ್‌ನವರಿಗೆ ವಹಿಸಿಕೊಡುವುದು ಈ ಕಾಲದ ಮಹಿಮೆ…
ಹತ್ತಿರದ ಬಂಧುವೊಬ್ಬರ ಮಗಳ ಮದುವೆ ನಿಶ್ಚಯವಾಗಿತ್ತು. ಅವರು ಎದುರು ಸಿಕ್ಕಾಗ, “ಮದುವೆಗೆ ಎಲ್ಲ ಸಿದ್ಧತೆಗಳಾಯ್ತಾ? ಏನಾದ್ರೂ ನನ್ನಿಂದ ಸಹಾಯ ಬೇಕಾ?’ ಎಂದು ಕೇಳಿದೆ. “ಹೂನ್ರೀ, ಇಷ್ಟು ದಿನ ಅದೇ ರಾಮಾಯಣ. ಚಿನ್ನದ ಬೆಲೆ ನೋಡಿದ್ರೆ ಆಕಾಶಕ್ಕೆ ಹೋಗಿದೆ. ಅಂದುಕೊಂಡಷ್ಟು ಒಡವೆ ಹೆಂಗೋ ಖರೀದಿಸಾಯ್ತು.
ಪ್ರಿವೆಡ್ಡಿಂಗ್‌ ಶೂಟ್‌ ಕೂಡಾ ಆಯಿತು. ಇವಳಿಗೆ ಡೆಸ್ಟಿನೇಷನ್‌ ವೆಡ್ಡಿಂಗ್‌ ಬೇಕು ಅಂತಿತ್ತು . ದುಡ್ಡೇನು ಸ್ವಲ್ಪ ಖರ್ಚಾಗುತ್ತಾ? ಈಗಲೇ ಮದುವೆ ಒಟ್ಟು ಖರ್ಚು ಇಪ್ಪತ್ತೈದು ಲಕ್ಷ ದಾಟುತ್ತೆ. ದುಡ್ಡು ಹೊಂದಿಸೋದು ಎಷ್ಟು ಕಷ್ಟ ಅಂತ ಮಾಡೋರಿಗೇ ಗೊತ್ತು. ಹೆಂಗೋ ಅವಳನ್ನು ಒಪ್ಪಿಸಿ ಹದಿನೈದು ದಿನ ಅಲೆದ ಮೇಲೆ ಅಂತೂ ಇಂತೂ ಒಂದೊಳ್ಳೆ ಛತ್ರ ಸಿಕು¤. ಕೇಟರರ್ಸ್‌ ಸ್ವಲ್ಪ ದುಬಾರಿ. ಆದರೆ ಚಾಟ್ಸ್‌ ಚೆನ್ನಾಗಿ ಮಾಡ್ತಾರೆ .. ಒಳ್ಳೆ ಹೆಸರಿದೆ ಅವರಿಗೆ. ಜೊತೆಗೆ ಬ್ರೈಡಲ್‌ ಮೇಕ್‌ಅಪ್‌, ಫೋಟೋ, ವಿಡಿಯೋದ್ದಂತೂ ಮಗಳಿಗೆ ಬೇಕಾದವರೇ ಆಗಬೇಕಿತ್ತು. ಛತ್ರ, ವಿಡಿಯೋದವರು, ಕೇಟರರ್, ಬ್ಯೂಟಿ ಸ್ಪಾ ಇವರೆಲ್ಲರ ಡೇಟ್‌ ಅಡ್ಜಸ್ಟ್ ಆಗಬೇಕು ನೋಡಿ. ಫ್ಲವರ್‌ ಡೆಕೋರೇಷನ್‌ ಬುಕ್ಕಿಂಗ್‌, ರಿಟರ್ನ್ ಗಿಫr… ಎಲ್ಲ ಆಯಿತು. ಉಂಡೆ ಚಕ್ಕುಲಿಗೂ ಆರ್ಡರ್‌ ಕೊಟ್ವಿ. ಸೀರೆ ಅವಳೇ ಡಿಸೈನ್‌ ಮಾಡಿದ್ದು . ಹೆಚ್ಚು ಕಡಿಮೆ ಎಲ್ಲಾ ಆದ ಹಾಗೆ…’
ಆಕೆ ಪಟಪಟನೆ ಆದ ಕೆಲಸಗಳ ಲಿಸ್ಟ್ ಒಪ್ಪಿಸುತ್ತಿದ್ದರೆ, ಇವುಗಳಲ್ಲಿ ನಾನು ಸಹಾಯ ಮಾಡುವಂಥದ್ದೇನಾದರೂ ಇದೆಯಾ ಎಂದು ಯೋಚಿಸಿ ನನ್ನ ದಡ್ಡತನಕ್ಕೆ ನಾನೇ ನಾಚಿಕೊಂಡೆ.
ಅದು ಊರ ಮದುವೆ
ಕಾಲ ಬದಲಾಗಿದೆ.. ಎಲ್ಲವೂ ಬದಲಾಗುತ್ತಿರುವ ಕಾಲದಲ್ಲಿ ಮದುವೆಯ ರೂಪುರೇಷೆ ಕೂಡಾ ಬದಲಾಗಿದೆ. ನಾನು ಬಾಲ್ಯದಲ್ಲಿ ಕಂಡ ಹಿಂದಿನ ಮದುವೆಗಳ ಸ್ವರೂಪವೇ ಬೇರೆ ಇತ್ತು. ಆಗೆಲ್ಲಾ ಒಂದು ಕುಟುಂಬದ ಮಗಳಿಗೋ, ಮಗನಿಗೋ ಮದುವೆ ಗೊತ್ತಾಗುತ್ತಿದ್ದಂತೆ ಸಂಭ್ರಮ ಶುರುವಾಗುತ್ತಿತ್ತು. ಊರಿನಲ್ಲಿ ಕ್ಷಣಾರ್ಧದಲ್ಲಿ ಸುದ್ದಿ ಹರಡುತ್ತಿತ್ತು. ಹೊರಗೆ ಯಾರಾದರೂ ಕಂಡರೆ ಸಾಕು; “ನಿಮ್ಮೆಲ್ಲರ ಸಹಕಾರ ಬೇಕು. ಹೆಂಗೆ ಮಾಡಿ ಮುಗಿಸುವುದೋ..’ ಅನ್ನೋ ಆತಂಕದ ಇವರ ಸ್ವರವೂ, “ನಾವೆÇÉಾ ಇದೀವಲ್ಲ. ಏನಾಗಬೇಕು ಹೇಳಿ. ಹೂವೆತ್ತಿದ ಹಾಗೆ ಮದುವೆಯಾಗುತ್ತೆ. ನೀವೇನೂ ಆತಂಕ ಪಡಬೇಡಿ’ ಎಂಬ ಅವರ ಭರವಸೆಯ ಸ್ವರವೂ ಕೇಳಿಬರುವುದು ಸಾಮಾನ್ಯವಾಗಿತ್ತು.
ಮದುವೆಗೆ ಬೇಕಾದ ಜವಳಿಯೂ ಸೀಮಿತವೇ. ಹುಡುಗಿಗೆ ನಾಲ್ಕೈದು ಬ್ಲೌಸ್‌ ಹೊಲೆಸಿಟ್ಟರೆ ಬೇಕಾದಷ್ಟಾಯಿತು. ಮಿಕ್ಕವರಿಗೆ ಸಡಗರಕ್ಕೊಂದು ಬಟ್ಟೆ. ಕಿವಿಯೋಲೆ, ತಾಳಿ, ಗುಂಡು, ಕೋವಿ, ಇನ್ನೂ ಅನುಕೂಲವಿದ್ದವರಾದರೆ ಸರ-ಬಳೆ. ಅಲ್ಲಿಗೆ ಅವೆರಡರ ಸಿದ್ಧತೆ ಮುಗಿದಂತೆ. ಕೇವಲ ಮದುವೆ ನಿಶ್ಚಯವಾದ ಮನೆಯವರಷ್ಟೇ ಅಲ್ಲ, ಸುತ್ತಲಿನ ಹತ್ತಾರು ಮನೆಗಳವರೂ ಮದುವೆಗೆ ಸಿದ್ಧರಾಗುತ್ತಿದ್ದರು. ಛತ್ರ ಫ‌ಳಗುಟ್ಟುವಂತೆ ಹೊಳೆಯಬೇಕೆಂದಿರಲಿಲ್ಲ. ಜಾಗದ ಅನುಕೂಲವಿದ್ದು ಮನೆಯÇÉೇ ಮದುವೆಯೆಂದಾದರೆ ಮನೆಯ ಸುತ್ತ ಮುತ್ತ ಜಾಗ ಸ್ವತ್ಛ ಗೊಳಿಸುವ ಕೆಲಸದ ಮೇಲ್ವಿಚಾರಣೆಗೆ ಮನೆ ಮಂದಿಯೇ ನಿಲ್ಲ ಬೇಕಿಲ್ಲ.
ಬೇಗ ಬೇಗ ಕೆಲಸ ಮುಗಿಸಿ ಇವರ ಮನೆಗೆ ಹಪ್ಪಳ, ಸಂಡಿಗೆಯ ಕೆಲಸಕ್ಕೆ ಓಡೋಡಿ ಬರುವುದು, ಉಂಡೆ-ಚಕ್ಕುಲಿಗಳ ತಯಾರಿ, ಬೇರೆ ಊರಿನ ಹತ್ತಿರದವರಿಗೆ ಮದುವೆ ಪತ್ರಿಕೆ ಕಳಿಸಲು ವಿಳಾಸ ಬರೆಯುವ ಜವಾಬ್ದಾರಿ ಒಬ್ಬರಿಗೆ, ಚಪ್ಪರಕ್ಕೆ ಬೇಕಾದ ತೆಂಗಿನಗರಿ, ಕಂಬಗಳನ್ನು ತಂದು ಚಪ್ಪರ ಕಟ್ಟುವವವರು, ಮಾವಿನ ಸೊಪ್ಪುಗಳಿಂದ ಸಿಂಗರಿಸುವವರು, ಮನೆಯ ಸುಣ್ಣ ಬಣ್ಣ ಹೊಡೆಸಿದ ಮೇಲೆ ಸಾರಣೆ-ಕಾರಣೆಯ ಸಡಗರ ನೋಡನೋಡುತ್ತಿದ್ದಂತೆಯೇ ಮದುವೆಮನೆ ಗಲಗಲ ನಗುತ್ತಿತ್ತು. ಯಾರೋ ಮಾಡಿದ ಗೆಜ್ಜೆವಸ್ತ್ರ, ಮತ್ಯಾರೋ ಕಟ್ಟಿದ ಮಲ್ಲಿಗೆ ದಂಡೆ..ಪಕ್ಕದ ಮನೆಯವರ ಒಡವೆ… ಅದು ಊರಿನ ಮದುವೆಯಂತೆ ಭಾಸ.
ಮದುಮಗಳು ಮನೆ ಮಗಳು
ನಾಂದಿಯಾದ ಮೇಲೆ ವಧುವರರೂ, ಅವರ ಅಪ್ಪ ಅಮ್ಮಂದಿರೂ ಹೊರಗೆ ಹೊರಡುವಂತಿರಲಿಲ್ಲ. ಅವರಿಗೆ ಹೊರಗಿನ ಕೆಲಸಗಳ ಯೋಚನೆ ಬರದಂತೆ ಸುತ್ತಮುತ್ತಲಿನವರು ನೆರವಾಗುತ್ತಿದ್ದರು. ಇದ್ದುದರಲ್ಲೇ ಹೊಸಬಟ್ಟೆಯುಟ್ಟು ತಲೆಗೆ ಹೂ ಮುಡಿದು ಅರಿಸಿನ ಕುಂಕುಮದ ಬಟ್ಟಲು ಹಿಡಿದು ಮನೆಮನೆಗೆ ಹೋಗಿ ಕರೆಯುವ ಹೆಣ್ಣು ಮಕ್ಕಳ ಸಡಗರ ಕಣ್ತುಂಬಿಕೊಳ್ಳುವಂತಿತ್ತು. ಮದುವೆಯ ದಿನ ಬೆಳಗಿನ ಜಾವದಲ್ಲಿ ಎಣ್ಣೆಯೊತ್ತುವ ಶಾಸ್ತ್ರ, ಹುಡುಗಿಗೆ ನೀರು ಹಾಕುವ ಹುಕಿ ಎಲ್ಲರಿಗೂ.. ಎರೆದ ಕೂದಲನ್ನು ಒಣಗಿಸುತ್ತಾ ಕೂರಲೂ ಸಮಯವಿಲ್ಲ.. ಥಂಡಿಯಾಗದ ಹಾಗೆ ಕೂದಲಿನ ಪಸೆ ಒರೆಸಿ ಅಳ್ಳಕವಾಗಿ ಜಡೆ ಹೆಣೆದು ಬಿಳಿಯ ಪತ್ತಲ ಉಡಿಸಿ, ಮೇಲಸೆರಗು ಹಾಕಿ, ಹೂ ಮೂಡಿಸಿ, ಬಾಸಿಂಗ ಕಟ್ಟಿ ಗೌರಿ ಪೂಜೆಗೆ ಕೂರಿಸಿದರೆ ಪೂಜೆ ಮುಗಿಯುವವರೆಗೂ ಅವಳು ಯಾವ ಕಾರಣಕ್ಕೂ ಬೇರೆಯ ಕಡೆ ತಿರುಗಿ ನೋಡುವಂತಿಲ್ಲ ..
ಕಾಶೀಯಾತ್ರೆಗೆ ಹೊರಟ ಮದುಮಗನನ್ನು ತಡೆಯಲು ಅಲಂಕೃತ ಛತ್ರಿ, ಕೋಲು, ದಿಬ್ಬಣ ಎದುರುಗೊಳ್ಳುವ ಸಡಗರ. ಈ ಯಾವುದರಲ್ಲೂ ಸಂಪ್ರದಾಯ, ಆಚರಣೆ ಕಿಂಚಿತ್ತೂ ಲೋಪವಾಗುವಂತಿರಲಿಲ್ಲ. ಧಾರೆಯ ಮಂಟಪದಲ್ಲಿ ಜೀರಿಗೆ ಬೆಲ್ಲ ಅಂಟಿಕೊಳ್ಳುವುದೆಂದು ತಲೆ ಕೆಡಿಸಿಕೊಳ್ಳುವವರಿಲ್ಲ.. ಕೆನ್ನೆಗೆ ಹಚ್ಚಿದ ಅರಿಸಿನ, ಹಣೆಯ ಮೇಲೆ ಹತ್ತಾರು ಜನ ಇಟ್ಟ ಕುಂಕುಮ ತುಂಬಿ ಹೋದರೂ ಅದನ್ನು ಅಂದು ಒರೆಸಿ ಸರಿ ಮಾಡುವಂತಿಲ್ಲ. ಅಲ್ಲಿ ಹೊರನೋಟದ ಬಗ್ಗೆ ಕೊಂಚವೂ ಗಮನವಿಲ್ಲ. ಏನಿದ್ದರೂ ಆಚರಣೆಗಳು ನಿರ್ವಿಘ್ನವಾಗಿ ಸಾಂಗವಾಗಿ ನಡೆಯಬೇಕು ಅಷ್ಟೇ. ಅಂದು ಅಲ್ಲಿ ಅವಳು ವಿಧಿವತ್ತಾಗಿ ಅವನ ಬಾಳು ಬೆಳಗುವ ಕನ್ಯೆ.. ಅವನು ಅವಳನ್ನು ಕಾಯೇನ ವಾಚಾ ಮನಸಾ ಮೀರದವ.
ಊಟ-ನೋಟ ಎಲ್ಲಾ ಸಿಂಪಲ್‌
ಊಟದಲ್ಲೂ ಇರಬೇಕಾದ ತಿನಿಸುಗಳಿರಬೇಕಷ್ಟೇ ವಿನಃ ಏನೇನೊ ಬಗೆಬಗೆಯ ಅಡುಗೆ ಮಾಡಿಸಿ ಬೀಗುವ ಮನೋಭಾವ ಹಿಂದೆ ಇರಲಿಲ್ಲ. ತುಂಬಾ ಶ್ರೀಮಂತರ ಮನೆಗಳಲ್ಲಷ್ಟೇ ಊಟದಲ್ಲಿ ವ್ಯತ್ಯಾಸವಿರುತ್ತಿತ್ತೇ ವಿನಃ, ಮಿಕ್ಕವರ ಮದುವೆಗಳಲ್ಲಿ ಅಂಥ ಹೇಳಿಕೊಳ್ಳುವ ವ್ಯತ್ಯಾಸವಿರುತ್ತಿರಲಿಲ್ಲ. ಭೂಮದೂಟಕ್ಕೆ ಮಾಡಿಸುವ ತಿಂಡಿಗಳು ಎಲ್ಲರ ಮನೆಯ ಮದುವೆಗಳಲ್ಲೂ ಅದದೇ. ಫೋಟೋ- ವಿಡಿಯೋಗಳ ಗದ್ದಲವಿಲ್ಲ. ಇದ್ದರೂ, ಅವರೂ ಇವರ ಆಚರಣೆಗಳಿಗೆ ಬೆಲೆ ಕೊಟ್ಟು ತಮ್ಮ ಕೆಲಸವನ್ನು ಪೂರೈಸಿಕೊಡುತ್ತಿದ್ದರು. ಹೆಣ್ಣೊಪ್ಪಿಸುವಾಗ , ಮನೆತುಂಬಿಸಿ ಕೊಳ್ಳುವಾಗ ಆಚರಣೆಗೆ ಮಾತ್ರ ಮಹತ್ವ ಎಂಬಲ್ಲಿಗೆ ಒಂದು ಮದುವೆ ಹೂವೆತ್ತಿದ ಹಾಗೆ ಮುಗಿದು ಹೋಗಿ, ಸಮಾಧಾನದ ನಿಟ್ಟುಸಿರು ಎಲ್ಲರದೂ ಆಗುತ್ತಿತ್ತು.
ಹಿಂದೆ, ಅಂದರೆ ಎರಡು-ಮೂರು ದಶಕಗಳ ಹಿಂದೆ ನಡೆಯುತ್ತಿದ್ದ ಮದುವೆ­ಗಳಿಗೂ, ಈ ನಡೆಯುವ ಮದುವೆಗಳಿಗೂ ವ್ಯತ್ಯಾಸವೇನಿರಬಹುದು? ಎರಡೂ ಕಡೆ ಇರುವುದು ಸಡಗರವೇ. ಒಂದರಲ್ಲಿ ಬಿಡುವು ಹೇರಳವಾಗಿದ್ದು ಜನರ ಸಹಕಾರದೊಡನೆ ಮದುವೆ ಮಾಡಿ ಮುಗಿಸುವ ಕ್ರಮವಾದರೆ, ಮತ್ತೂಂದರಲ್ಲಿ ಎಲ್ಲವನ್ನೂ ದುಡ್ಡಿನ ಅನುಕೂಲದಿಂದ, ಬದಲಾದ ಕಾಲಮಾನಕ್ಕೆ ತಕ್ಕಂತೆ ಮದುವೆ ಮಾಡುವ ಹಂಬಲ. ಈಗಿನ ದಿನಗಳಲ್ಲಿ, ವಿಡಿಯೋ­ದವರಿ­ಗಾಗಿಯೇ ಮದುವೆ ಮಾಡುತಿ­ದ್ದಾರೇನೋ ಎಂಬ ಸಂಶಯ ಬರುವಷ್ಟರ ಮಟ್ಟಿಗೆ ಅವರಿಗೆ ಪ್ರಾಮುಖ್ಯತೆ. ಹಪ್ಪಳ ಸಂಡಿಗೆಯನ್ನೂ ಕೇಟರರ್ಸ್‌ನವರು ನೋಡಿಕೊಳ್ಳುತ್ತಾರೆ. ಹೊರಗಿನ ಆದ್ಯತೆಗಳು ಬದಲಾದಂತೆ ಮದುವೆಯ ಆದ್ಯತೆಗಳೂ ಬದಲಾಗಿವೆ. ಅದೊಂದು ಸ್ಟೇಟಸ್‌ ತೋರಿಸಿಕೊಳ್ಳುವ ಕ್ರಿಯೆಯಷ್ಟೇ ಆಗಿರದೆ, ಸಂಭ್ರಮಿಸುವ ಹೊಸ ರೀತಿಯೂ ಆಗಿದೆ. ಯಾವುದೇ ರೀತಿಯ ಮದುವೆ ನಡೆದರೂ ಬಂಧಗಳು ಗಟ್ಟಿಯಾಗಿ ಉಳಿಯಲಿ, ಧಾವಂತಕ್ಕೆ , ತೋರುಗಾಣಿಕೆಗೆ ದಾಂಪತ್ಯ ಬಲಿ­ಯಾಗದಿರಲಿ.
ಮಾಲಿನಿ ಗುರುಪ್ರಸನ್ನ

ನೇಚರ್‌ ನಗರಿ; ಇಲ್ಲಿ ವಾಹನ ಓಡಾಟವೇ ಇಲ್ಲ



ರಸ್ತೆ ಮೇಲೆ ವಾಹನಗಳ ಓಡಾಟ ಕೆಲ ನಿಮಿಷಗಳ ಮಟ್ಟಿಗೆ ನಿಂತರೂ ಮನಸ್ಸಿಗೆ ಅದೇನೋ ನೆಮ್ಮದಿ. ವಾಹನಗಳೇ ಓಡಾಡದ ರಸ್ತೆಗಳಿರುವ ನಗರ ಭೂಮಿ ಮೇಲೆ ಇದೆ ಎಂದರೆ ಮೊದಲ ಏಟಿಗೆ ನಂಬುವುದು ಕಷ್ಟ. ಆದು ಅಮೆರಿಕದ ಮೆಕಿನ್ಯಾಕ್‌ ದ್ವೀಪದಲ್ಲಿದೆ.
ಮೆಕಿನ್ಯಾಕ್‌ ದ್ವೀಪ ಒಂದು ಪ್ರವಾಸಿ ತಾಣ. ಅಲ್ಲಿ ಪ್ರಾಚೀನ ಕಾಲದ ಕೋಟೆಗಳನ್ನು ಸಂರಕ್ಷಿಸಿ ಇಡಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಗರ ಗಮನ ಸೆಳೆಯುವುದು ತನ್ನ ವಾಹನ ನಿರ್ಬಂಧಿತ ರಸ್ತೆಗಳಿಂದ. 1898ರಿಂದಲೇ ಇಲ್ಲಿ ವಾಹನಗಳಿಗೆ ನಿಷೇಧ ಹೇರಲಾಗಿದೆ. ಹಾಗಾದರೆ ಇಲ್ಲಿನ ನಿವಾಸಿಗಳು ಹೇಗೆ ಪ್ರಯಾಣಿಸುತ್ತಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಅವರೆಲ್ಲರೂ ಸೈಕಲ್‌ಗ‌ಳನ್ನು ನೆಚ್ಚಿಕೊಂಡಿದ್ದಾರೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರೂ ಅಷ್ಟೇ, ಸೈಕಲ್‌ಗ‌ಳನ್ನೇ ಬಾಡಿಗೆಗೆ ಪಡೆದು ಚಲಾಯಿಸುತ್ತಾರೆ. ಅನೇಕ ವೇಳೆ ಕಾಲ್ನಡಿಗೆಯಲ್ಲೇ ಕ್ರಮಿಸುವುದೂ ಉಂಟು. ಮಜವೆಂದರೆ ಅಲ್ಲಿನ ಪೊಲೀಸರು ಕೂಡಾ ಸೈಕಲ್‌ನಲ್ಲಿ ಪ್ರಯಾಣಿಸುತ್ತಾರೆ.
ಕುದುರೆ ಗಾಡಿ
ಮೈಸೂರಿಗೆ ಭೇಟಿ ಕೊಟ್ಟವರು ಅಲ್ಲಿನ ರಸ್ತೆಗಳಲ್ಲಿ ಕುದುರೆ ಗಾಡಿಗಳಲ್ಲಿ ಪ್ರಯಾಣಿಕರು, ಪ್ರವಾಸಿಗರು ಸಂಚರಿಸುವುದನ್ನು ನೋಡಿರುತ್ತೀರಾ. ಅಲ್ಲಿ ಟ್ರಾಫಿಕ್‌ನಲ್ಲಿ ಹೊಗೆಯುಗುಳುವ ವಾಹನಗಳ ಮಧ್ಯೆ ಕುದುರೆ ಗಾಡಿ ಠಾಕು ಠೀಕಾಗಿ ಹೋಗುತ್ತದೆ. ಆದರೆ ಮೆಕಿನ್ಯಾಕ್‌ನಲ್ಲಿ ರಸ್ತೆಗಳ ಮೇಲೆ ಕುದುರೆ ಗಾಡಿಗಳು ಯಾವುದೇ ಹಾರ್ನ್ಗಳ ಕಿರಿಕಿರಿಯಿಲ್ಲದೆ ರಾಜಾರೋಷವಾಗಿ ಪ್ರಯಾಣಿಸುವುದನ್ನು ಕಾಣಬಹುದು. ಸೈಕಲ್‌ ಬಿಟ್ಟರೆ ಅಲ್ಲಿನ ಪ್ರಮುಖ ಸಾರಿಗೆ ವ್ಯವಸ್ಥೆ ಎಂದರೆ ಕುದುರೆ ಗಾಡಿಗಳೇ.
ಚಳಿಗಾಲದಲ್ಲಿ ಹೊಸ ವಾಹನ
ಅಮೆರಿಕದಲ್ಲಿ ಚಳಿ ಎಂದರೆ ನಮ್ಮ ಊರುಗಳಂತಲ್ಲ. ಮನೆಗಳೇ ಮುಚ್ಚಿಹೋಗುವಷ್ಟು ಹಿಮಸುರಿಯುತ್ತದೆ. ಆ ವಾತಾವರಣದಲ್ಲಿ ಕುದುರೆಗಾಡಿ, ಸೈಕಲ್‌ ಯಾವುವೂ ಉಪಯೋಗಕ್ಕೆ ಬಾರದು. ಹೀಗಾಗಿ ಚಳಿಗಾಲದಲ್ಲಿ ಮಾತ್ರ ಅಲ್ಲಿನ ಆಡಳಿತ ಹೊಸದೊಂದು ವಾಹನಕ್ಕೆ ಅನುಮತಿ ನೀಡುತ್ತದೆ. ಅದರ ಹೆಸರು “ಸ್ನೋ ಮೊಬಿಲ್‌’. ಅದು ಹಿಮದ ಮೇಲೆ ಜಾರುವ ಇಂಧನ ಆಧಾರಿತ ಪುಟ್ಟ ವಾಹನ. ಅದರಲ್ಲಿ ಒಬ್ಬರು ಆರಾಮಾಗಿ ಕುಳಿತುಕೊಳ್ಳಬಹುದು. ಅದನ್ನು ಬೈಕಿನಂತೆ ಚಲಾಯಿಸಲಾಗುತ್ತದೆ.
ಉಪಾಧ್ಯಕ್ಷರ ದ್ವಂದ್ವ
ಕೆಲ ವರ್ಷಗಳ ಹಿಂದೆ ಅಮೆರಿಕದ ಉಪಾಧ್ಯಕ್ಷರು ನಗರಕ್ಕೆ ಭೇಟಿ ನೀಡಿದ್ದರು. ಅಮೆರಿಕದ ರಾಜಕಾರಣಿಗಳಿಗೆ, ಮಂತ್ರಿಗಳಿಗೆ ನೀಡುವ ಭದ್ರತಾ ವ್ಯವಸ್ಥೆ ತುಂಬಾ ಕಟ್ಟುನಿಟ್ಟಾಗಿರುತ್ತದೆ. ಹೀಗಾಗಿ ಉಪಾಧ್ಯಕ್ಷರು ಸ್ಥಳೀಯ ನಿಯಮವನ್ನು ಪಾಲಿಸುವರೇ ಇಲ್ಲವೇ ಎಂಬುದರ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಭದ್ರತಾ ಕಾರಣಗಳಿಂದಾಗಿ ಅವರು ಸೈಕಲ್‌ ಅಥವಾ ಕುದುರೆಗಾಡಿಗಳನ್ನು ಬಳಸಲಿಲ್ಲ. ಅವರು ಎಂದಿನಂತೆ ಬುಲೆಟ್‌ಪ್ರೂಫ್ ಕಾರಿನಲ್ಲಿಯೇ ಪ್ರಯಾಣಿಸಿದರು. ಆ ಸಮಯದಲ್ಲಿ ಎಲ್ಲೆಡೆ ವಾದ ಪ್ರತಿವಾದಗಳು ಕೇಳಿ ಬಂದಿದ್ದವು. ಅದೇನೇ ಇರಲಿ. ಈ ರಸ್ತೆಗಳಲ್ಲಿ ಇನ್ನೊಂದು ಬಾರಿ ವಾಹನ ಚಲಾಯಿಸಲು ಅನುಮತಿ ನೀಡಲಾಗಿತ್ತು. ಸೂಪರ್‌ ಮ್ಯಾನ್‌ ಸಿನಿಮಾ ಖ್ಯಾತಿಯ ಕ್ರಿಸ್ಟೋಫ‌ರ್‌ ರೀವ್‌ ಅಬಿನಯದ ಸಿನಿಮಾ ಶೂಟಿಂಗಿಗೆಂದು ಅನುಮತಿ ನೀಡಲಾಗಿತ್ತು. ಅದು ಬಿಟ್ಟರೆ ಯಾರಿಗೂ ವಾಹನ ಚಲಾಯಿಸಲು ಅನುಮತಿ ನೀಡಿಲ್ಲ.
ಹರ್ಷವರ್ಧನ್‌ ಸುಳ್ಯ

ವಿಶ್ವದ ಬಲಿಷ್ಠ ಹುಡುಗಿ ವಾರ‍್ಯಾ ಅಕುಲೋವಾ

a small introduction about world's strongest girl Varya Akulova


ಆರನೇ ವಯಸ್ಸಿನಲ್ಲಿದ್ದಾಗ ರಷ್ಯಾದ ಎರಡು ಕೆಟಲ್‌ ಬೆಲ್‌ ತೂಕವನ್ನು ಎತ್ತುವುದರ ಮೂಲಕ ವೀಕ್ಷಕರನ್ನು ನಿಬ್ಬೆರಗಾಗಿಸಿದಳು. ಎಂಟನೆಯ ವಯಸ್ಸಿನಲ್ಲಿ ಸಲೀಸಾಗಿ ನೂರು ಕೆ.ಜಿ. ಭಾರವನ್ನೆತ್ತಿ ಗಿನ್ನೆಸ್‌ ದಾಖಲೆಗೆ ಸೇರಿಕೊಂಡಳು. ಆಗ ಅವಳ ದೇಹದ ಭಾರ 40 ಕಿಲೋ ಇತ್ತು. ಹದಿನಾಲ್ಕನೆಯ ವಯಸ್ಸಿನಲ್ಲಿ ತನ್ನ ದೇಹ ತೂಕ ಎಂಭತ್ತು ಕಿಲೋ ಇದ್ದರೂ ಇದರ ನಾಲ್ಕು ಪಟ್ಟು ಭಾರವಾಗಿರುವ ಮೂರೂವರೆ ಕ್ವಿಂಟಾಲು ತೂಕದ ಪದಾರ್ಥವನ್ನು ಎತ್ತುವುದರ ಮೂಲಕ ಗಿನ್ನೆಸ್‌ ದಾಖಲೆಯಲ್ಲಿ ಇನ್ನೊಮ್ಮೆ ಸೇರಿ ವಿಶ್ವದ ಅತ್ಯಂತ ಬಲಶಾಲಿ ಹುಡುಗಿ ಎಂಬ ಕೀರ್ತಿಯನ್ನು ಗಳಿಸಿದಳು.
ವಿಶ್ವದ ಅತ್ಯಂತ ಬಲಶಾಲಿಯಾದ ಹುಡುಗಿ ಯಾರು ಅಂತ ಕೇಳಿದರೆ ಗಿನ್ನೆಸ್‌ ದಾಖಲೆ ಹೇಳುವ ಹೆಸರು ವಾರ್ಯಾ ಅಕುಲೋವಾ. ಉಕ್ರೇನ್‌ನ ಕ್ರಿವೋಯ್‌ ರೋಗ್‌ ಪಟ್ಟಣದಲ್ಲಿ 1992ರ ಜನವರಿಯಲ್ಲಿ ಜನಿಸಿದ ಅವಳ ತಂದೆ ಯಾರ್ಲಿ ಅಕುಲೋವಾ, ತಾಯಿ ಲಾರಿಸಾ ಇಬ್ಬರೂ ಸರ್ಕಸ್‌ ಕಂಪೆನಿಯ ಕಲಾವಿದರು. ಸಾಹಸ ಇವರ ಜೀನ್ಸ್‌ನಲ್ಲಿಯೇ ಬೆರೆತು ಬಂದಿತ್ತು. ವಾರ್ಯಾಳ ಮುತ್ತಾತ ಬೆನ್ನಿನ ಮೇಲೆ 1,200 ಕಿ.ಲೋ ಭಾರದ ಗಂಟು ಹೊತ್ತುಕೊಂಡು ಸಲೀಸಾಗಿ ಹೋಗುತ್ತಿದ್ದರಂತೆ. ಶೌರ್ಯ, ಪರಾಕ್ರಮಗಳು ಅವರ ವಂಶಕ್ಕೆ ದೇವರಿತ್ತ ಬಳುವಳಿ. ರಾಣಿ ಎರಡನೆಯ ಕ್ಯಾಥರಿನ್‌ಳ ಕಾಲದಲ್ಲಿ ಸಾಹಸದಲ್ಲಿ ಪ್ರಸಿದ್ಧರಾಗಿದ್ದ ಹಿರಿಯರು ಟರ್ಕಿಷ್‌-ರಷ್ಯಾ ಯುದ್ಧದಲ್ಲಿಯೂ ತೋಳ್ಬಲ ಪ್ರದರ್ಶಿಸಿದ್ದರು. ಲಾರಿಸಾ ವಾರ್ಯಾಳ ಗರ್ಭಿಣಿಯಾಗಿರುವಾಗ ತನ್ನ ಹಾಗೆಯೇ ಸರ್ಕಸ್ಸಿನಲ್ಲಿ ಚಮತ್ಕಾರ ತೋರಿಸಬಲ್ಲ ಗಂಡುಮಗುವೇ ಜನಿಸುತ್ತದೆಂಬ ಕನಸು ಕಂಡಿದ್ದಳು. ಆದರೆ, ಹೆಣ್ಣುಮಗು ಜನಿಸಿರುವುದು ಕಂಡು ಕನಸು ನುಚ್ಚುನೂರಾಯಿತೆಂದು ದುಃಖೀಸಿದ್ದರಂತೆ. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು.
ಆದರೆ, ಚಿಕ್ಕವಳಿರುವಾಗಲೇ ವಾರ‍್ಯಾ ಹೆಣ್ಣಾದರೂ ತಾಯಿಯ ಕನಸುಗಳನ್ನು ನನಸು ಮಾಡಬಲ್ಲೆನೆಂಬ ವಿಶ್ವಾಸ ಮೂಡಿಸಿದಳು. ಒಂದು ತಿಂಗಳ ಮಗುವಿನಲ್ಲೇ ಅಸಾಧಾರಣ ಶಕ್ತಿಯಿರುವುದು ತಾಯಿಗೆ ಅರಿವಾಯಿತು. ಒಂದು ವರ್ಷದಲ್ಲೇ ಒಂದು ಕೈಯನ್ನು ನೆಲಕ್ಕೂರಿ ಗಿರಿಗಿರಿ ತಿರುಗುವ ಸಾಮರ್ಥ್ಯ ಹುಡುಗಿಯಲ್ಲಿತ್ತು. ಭುಜಗಳ ಮೇಲೆ ಭಾರವನ್ನೂ ಎತ್ತುತ್ತಿದ್ದಳಂತೆ. ಮೂರನೆಯ ವಯಸ್ಸಿನಲ್ಲಿ ಹೆತ್ತವರ ಜೊತೆಗೆ ಸರ್ಕಸ್ಸಿನಲ್ಲಿ ಹಲವು ಆಟಗಳನ್ನು ಪ್ರದರ್ಶಿಸತೊಡಗಿದಳು. ನಾಲ್ಕನೆಯ ವಯಸ್ಸಿನಲ್ಲಿ ಪವರ್‌ ಲಿಫ್ಟಿಂಗ್‌ ವ್ಯಾಯಾಮದಲ್ಲಿ ಪಳಗಿದಳು. ಅದರಲ್ಲಿ ಹಲವು ಸಲ ಸ್ಪರ್ಧೆಗಳಲ್ಲಿ ಅತ್ಯಧಿಕ ಭಾರವನ್ನೆತ್ತುವ ಶೌರ್ಯ ಪ್ರದರ್ಶಿಸಿ ಮೊದಲ ಸ್ಥಾನ ಪಡೆದಳು.
ವಾರ‍್ಯಾಳಿಗೆ ಆರನೇ ವಯಸ್ಸಿನಲ್ಲಿದ್ದಾಗ ರಷ್ಯಾದ ಎರಡು ಕೆಟಲ್‌ ಬೆಲ್‌ ತೂಕವನ್ನು ಎತ್ತುವುದರ ಮೂಲಕ ವೀಕ್ಷಕರನ್ನು ನಿಬ್ಬೆರಗಾಗಿಸಿದಳು. ಎಂಟನೆಯ ವಯಸ್ಸಿನಲ್ಲಿ ಸಲೀಸಾಗಿ ನೂರು ಕೆ.ಜಿ. ಭಾರವನ್ನೆತ್ತಿ ಗಿನ್ನೆಸ್‌ ದಾಖಲೆಗೆ ಸೇರಿಕೊಂಡಳು. ಆಗ ಅವಳ ದೇಹದ ಭಾರ 40 ಕಿಲೋ ಇತ್ತು. ಹದಿನಾಲ್ಕನೆಯ ವಯಸ್ಸಿನಲ್ಲಿ ತನ್ನ ದೇಹ ತೂಕ ಎಂಭತ್ತು ಕಿಲೋ ಇದ್ದರೂ ಇದರ ನಾಲ್ಕು ಪಟ್ಟು ಭಾರವಾಗಿರುವ ಮೂರೂವರೆ ಕ್ವಿಂಟಾಲು ತೂಕದ ಪದಾರ್ಥವನ್ನು ಎತ್ತುವುದರ ಮೂಲಕ ಗಿನ್ನೆಸ್‌ ದಾಖಲೆಯಲ್ಲಿ ಇನ್ನೊಮ್ಮೆ ಸೇರಿ ವಿಶ್ವದ ಅತ್ಯಂತ ಬಲಶಾಲಿ ಹುಡುಗಿ ಎಂಬ ಕೀರ್ತಿಯನ್ನು ಗಳಿಸಿದಳು. ಒಂಭತ್ತನೆಯ ವಯಸ್ಸಿನಲ್ಲಿ ನಾಲ್ಕು ಮಕ್ಕಳನ್ನು ಹೆಗಲ ಮೇಲೆ ಹೊತ್ತು ನಡೆಯುವ ಸಾಮರ್ಥ್ಯವಿದ್ದ ವಾರ್ಯಾ ಮುಂದೆ ಮೂವರು ಬಲಶಾಲಿಗಳನ್ನು ಹೀಗೆಯೇ ಹೊರಬಲ್ಲೆನೆಂದು ತೋರಿಸಿದಳು. ಮೊದಲು ತಂದೆಯನ್ನು ಎತ್ತಿಕೊಂಡು ನಡೆಯುವ ಶಕ್ತಿ ಪ್ರದರ್ಶಿಸಿದಳು. ಹನ್ನೆರಡನೆಯ ವಯಸ್ಸಿನಲ್ಲಿ ತಂದೆ, ತಾಯಿ ಇಬ್ಬರನ್ನಲ್ಲದೆ ಮೂರು ಕೆಟಲ್‌ ಬೆಲ್‌ಗ‌ಳನ್ನೂ ಹೊತ್ತುಕೊಂಡು ನಡೆದಾಡುವುದು ಅವಳಿಗೆ ಬಹು ಸುಲಭವೆನಿಸುತ್ತಿತ್ತು.
ಹುಡುಗಿಯೊಬ್ಬಳು ಭಾರವೆತ್ತುವುದು ಸರ್ವಥಾ ಸರಿಯಲ್ಲ ಎಂಬ ಟೀಕೆಯನ್ನು ನಗುತ್ತಲೇ ಸ್ವೀಕರಿಸಿರುವ ವಾರ‍್ಯಾ ಅದಕ್ಕೆ ಉತ್ತರ ಕೊಟ್ಟಿಲ್ಲ. ಈಗ ಕೀವ್‌ ನಗರದಲ್ಲಿ ಅವಳ ವಾಸ. ತೀರ ಸರಳವಾದ ಆಹಾರ. ಚಹಾ, ಬ್ರೆಡ್‌, ಒಂದು ಮೊಟ್ಟೆ, ದಿನಕ್ಕೆ ಒಂದು ಸಲ ಹಾಲು, ಹಣ್ಣಿನ ರಸ, ನೂಡಲ್ಸ್‌, ಅಪರೂಪಕ್ಕೊಮ್ಮೆ ಮಾಂಸಾಹಾರ ಇದಿಷ್ಟೇ ಅವಳಿಗೆ ಸಾಕಾಗುತ್ತದೆ.
ಸ್ಟಿರಾಯ್ಡ ಸೇವನೆ ಇಲ್ಲ. ಬಾಕ್ಸಿಂಗ್‌, ಕಿಕ್‌ ಬಾಕ್ಸಿಂಗ್‌ ಅವಳಿಗೆ ಗೊತ್ತಿದೆ. ಮುಂದೆ ಒಲಿಂಪಿಕ್‌ನಲ್ಲಿ ಬಂಗಾರದ ಪದಕ ಗಳಿಸಬೇಕೆಂಬ ಮನದಿಚ್ಛೆ ಈ ಇಪ್ಪತ್ನಾಲ್ಕರ ಹರಯದ ಕೋಮಲೆಯದು.

ಪರಾಶರ

Monday, April 6, 2020

ದೇವನಹಳ್ಳಿ ಬೋಂಡಾ ಸ್ಟಾಲ್‌!

a small introduction about bonda stall located in devanahalli bangalore rural



ಬೋಂಡಾ, ಬಜ್ಜಿ, ಪಕೋಡವನ್ನು ಸಾಮಾನ್ಯವಾಗಿ ಎಲ್ಲಾ ಕಡೆ ಮಾಡ್ತಾರೆ. ಆದ್ರೆ, ಕೆಲವರು ತಿಂಡಿಗೆ ಬಳಸುವ ಪದಾರ್ಥ, ಕೈ ರುಚಿ, ಶುಚಿತ್ವ, ಹೀಗೆ… ಹಲವು ಕಾರಣಗಳಿಂದ ಗ್ರಾಹಕರಿಂದ ವಿಶೇಷವಾಗಿ ಗುರುತಿಸಿಕೊಂಡಿರುತ್ತಾರೆ. ಇಂತಹದ್ದೇ ಬೋಂಡಾ ಅಂಗಡಿಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿದೆ. ಅದಕ್ಕೆ ಯಾವುದೇ ನಾಮಫ‌ಲಕವಿಲ್ಲ. ಬೋಂಡಾದಿಂದಲೇ ಹೆಸರುವಾಸಿಯಾಗಿರುವ ರುದ್ರಪ್ಪ ಈ ಅಂಗಡಿಯ ಮಾಲೀಕರು.
ಆಂಧ್ರ ಪ್ರದೇಶದ ಹಿಂದೂಪುರ ತಾಲೂಕು ಚಿಲಮತ್ತೂರು ಮಂಡಲ್‌ನವರಾದ ರುದ್ರಪ್ಪರ ತಂದೆ, ತಾತ ಕೂಡ ಬೋಂಡಾ ಮಾರಾಟ ಮಾಡುತ್ತಿದ್ದರು. ಮದುವೆ ಆದ ನಂತರ ರುದ್ರಪ್ಪ, 1985ರಲ್ಲಿ ಕೆಲಸ ಹುಡುಕಿಕೊಂಡು ಹೊಸಕೋಟೆಯಲ್ಲಿದ್ದ ತಮ್ಮ ದೊಡ್ಡಪ್ಪನ ಮನೆಗೆ ಬಂದಾಗ, ಆ ದೇವನಹಳ್ಳಿಯಲ್ಲಿನ ಸಿದ್ದೇಶ್ವರ ಹೋಟೆಲ್‌ಗೆ ಇವರನ್ನು ಸೇರಿಸುತ್ತಾರೆ. ನಂತರ ಕೆನರಾ ಹೋಟೆಲ್‌ ಸೇರಿಕೊಂಡು ಅಲ್ಲಿಯೂ ಸ್ವಲ್ಪ ದಿನ ಕೆಲಸ ಮಾಡಿದ ನಂತರ ಆ ಹೋಟೆಲ್‌ ಮುಚ್ಚಿಹೋಗುತ್ತದೆ. ನಿರುದ್ಯೋಗಿ ಆದ ರುದ್ರಪ್ಪಗೆ ಹೋಟೆಲ್‌ನಲ್ಲಿದ್ದಾಗ ರಾಯರು ಕಲಿಸಿದ್ದ ಅಡುಗೆ ಕೆಲಸವನ್ನೇ ಉದ್ಯೋಗ ಮಾಡಿಕೊಂಡು, ಶಾಲಾ ಸಮಾರಂಭ, ಇತರೆ ಶುಭ ಕಾರ್ಯಗಳಲ್ಲಿ ಅಡುಗೆ ಕೆಲಸಕ್ಕೆ ಹೋಗುತ್ತಿದ್ದರು. ಆದರೆ, ಇದರಿಂದ ಸಂಸಾರ ತೂಗಿಸುವುದು ಕಷ್ಟವಾಗಿ 1988ರಲ್ಲಿ ದೇವನಹಳಿಯಲ್ಲಿನ ಗಾಂಧಿ ಚೌಕದ ಸಮೀಪದಲ್ಲಿ ಬೋಂಡಾ, ಬಜ್ಜಿ, ಪಕೋಡ ಮಾಡಲು ಶುರು ಮಾಡಿದ್ದಾರೆ. ಆಗ ಒಂದು ಬೋಂಡಾದ ಬೆಲೆ 10 ಪೈಸೆ ಇತ್ತು ಎನ್ನುತ್ತಾರೆ ರುದ್ರಪ್ಪ. ಕೆಲ ವರ್ಷಗಳ ನಂತರ ಹೊಸ ಬಸ್‌ ನಿಲ್ದಾಣದ ಸಮೀಪದಲ್ಲಿ ಚಿಕ್ಕದಾಗಿ ಮಳಿಗೆಯೊಂದನ್ನು ಬಾಡಿಗೆಗೆ ಪಡೆದು, 30 ವರ್ಷಗಳಿಂದ ಬೋಂಡ ಮಾರಿಕೊಂಡೇ ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಪತ್ನಿ ಸಿದ್ದಗಂಗಮ್ಮ, ಸೊಸೆ ಲತಾ ಸಾಥ್‌ ನೀಡುತ್ತಾರೆ.
ಟೇಸ್ಟ್‌ ಮೇಂಟೆನೆನ್ಸ್‌
ಹೋಟೆಲ್‌ನಲ್ಲಿ ಅಡುಗೆ ಕೆಲಸವನ್ನಷ್ಟೇ ಕಲಿತಿದ್ದ ರುದ್ರಪ್ಪ, ಬೋಂಡಾ, ಬಜ್ಜಿ ಮಾಡೋದನ್ನು ಬೇರೆಯವರಿಂದ ಕಲಿತಿದ್ದಾರೆ. ಬೋಂಡಾ ತಿಂದ ಗ್ರಾಹಕರು ಯಾವಾಗ ರುಚಿಯಾಗಿದೆ ಅಂದ್ರೋ ಅಲ್ಲಿಂದ ಈವರೆಗೂ ಅದೇ ಗುಣಮಟ್ಟದ ಪದಾರ್ಥಗಳನ್ನು, ಬಳಸಲು ಶುರು ಮಾಡಿದ್ರಂತೆ. ಕಡಲೇಹಿಟ್ಟು, ಇತರೆ ಮಸಾಲೆ ಪದಾರ್ಥಗಳನ್ನು, ಅವುಗಳ ದರ ಹೆಚ್ಚಾದ್ರೂ ಮೊದಲಿನಿಂದಲೂ ಒಂದು ಅಂಗಡಿಯಲ್ಲೇ ಖರೀದಿ ಮಾಡ್ತಾ ಇದ್ದೀನಿ ಅನ್ನುತ್ತಾರೆ ರುದ್ರಪ್ಪ.
ಗರಿಗರಿ ರುಚಿರುಚಿ
ಬೇರೆ ಕಡೆ ಬೋಂಡಾ ಸ್ವಲ್ಪ ಮೆದುವಾಗಿರುತ್ತದೆ. ಆದರೆ, ಇವರು ಗರಿಗರಿಯಾಗಿ ಮಾಡುತ್ತಾರೆ. ಇದು ಗ್ರಾಹಕರಿಗೆ ಒಂದು ವಿಶೇಷ ಅನುಭವಕೊಡುತ್ತದೆ. ಸದಾ ಗ್ರಾಹಕರ ಸಂಖ್ಯೆ ನೋಡಿಕೊಂಡು ಬಿಸಿ ಬಿಸಿಯಾದ ಬೋಂಡಾ, ವಡೆ ತಯಾರಿಸಿ ಕೊಡ್ತಾರೆ. ಕೆಲವು ಗ್ರಾಪಕರು 200, 300 ರೂ.ವರೆಗೂ ಬೋಂಡಾ, ವಡೆ ತೆಗೆದುಕೊಂಡು ಹೋಗುತ್ತಾರೆ.
ಕ್ಯಾಪ್ಸಿಕಂ ಬಜ್ಜಿ ವಿಶೇಷ:
ಬೋಂಡಾದ ಜೊತೆಗೆ ಕ್ಯಾಪ್ಸಿಕಂ ಬಜ್ಜಿಯನ್ನು ಗ್ರಾಹಕರು ಹೆಚ್ಚು ಇಷ್ಟ ಪಡುತ್ತಾರೆ. ಕತ್ತರಿಸದ ಒಂದು ಕ್ಯಾಪ್ಸಿಕಂ ಅನ್ನು ಕಲಿಸಿದ ಕಡ್ಲೆ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯಲಾಗುತ್ತೆ. ನಂತರ ಅದನ್ನು ನಾಲ್ಕು ಭಾಗ ಮಾಡಿ, ಅದಕ್ಕೆ ಕ್ಯಾರೆಟ್‌, ಈರುಳ್ಳಿ, ಸೌತೆ ಕಾಯಿ, ಟೊಮೆಟೋ ಚುರು, ಚಟ್ನಿ ಹಾಕಿ ಕೊಡ್ತಾರೆ. (2ಕ್ಕೆ 10 ರೂ.).
ಅಂಗಡಿಯಲ್ಲಿ ಸಿಗುವ ತಿಂಡಿ:
ಮಸಾಲೆ ವಡೆ, ಆಲೂಗಡ್ಡೆ ಬೋಂಡಾ, ಸೊಪ್ಪಿನ ಬೋಂಡಾ, ಮೆಣಸಿನ ಕಾಯಿ ಬಜ್ಜಿ, ರವೆ ವಡೆ, ಮದ್ದೂರು ವಡೆ, ಪಕೋಡ, ಹೀರೇಕಾಯಿ ಬಜ್ಜಿ, ಉದ್ದಿನ ವಡೆ, ಹೆಸರುಕಾಳು ಹುಸ್ಲಿ ಹೀಗೆ 12 ತರಹದ ತಿಂಡಿ ಮಾಡಲಾಗುತ್ತೆ. ಜೊತೆಗೆ ಚಟ್ನಿ ಇರುತ್ತೆ. ದರ 10 ರೂ.(ನಾಲ್ಕಕ್ಕೆ).
ಅಂಗಡಿ ವಿಳಾಸ:
ಹೊಸ ಬಸ್‌ ನಿಲ್ದಾಣ ಹಿಂಭಾಗ, ಅಲಹಬಾದ್‌ ಬ್ಯಾಂಕ್‌ ಎದುರು, ದೇವನಹಳ್ಳಿ ಪಟ್ಟಣ.
ಅಂಗಡಿ ಸಮಯ:
ಮಧ್ಯಾಹ್ನ 12 ರಿಂದ ರಾತ್ರಿ 9 ಗಂಟೆ. ಭಾನುವಾರ ರಜೆ
-ಭೋಗೇಶ್‌ ಆರ್‌.ಮೇಲುಕುಂಟೆ/ ಎಸ್‌.ಮಹೇಶ್‌

ಅವರ್‌ ಗ್ಲಾಸ್‌

a small introduction about hour glass


ಮ್ಯೂಸಿಯಂಗಳಲ್ಲಿ ಇವುಗಳನ್ನು ನೋಡಿರುವ ಸಾಧ್ಯತೆ ಹೆಚ್ಚು. ಗೋಡೆ ಗಡಿಯಾರ, ಕೈಗಡಿಯಾರ, ಅಲಾರಂ , ಅಷ್ಟೇ ಯಾಕೆ ಸಮಯ ಅಳೆಯುವ ಯಾವುದೇ ಉಪಕರಣ ಆವಿಷ್ಕಾರಗೊಳ್ಳುವುದಕ್ಕೆ ಮೊದಲೇ ಬಳಕೆಯಲ್ಲಿದ್ದ ಸಮಯ ಅಳೆಯುವ ಸಾಧನವಿದು. ಇಂದು ಸಮಯವನ್ನು ಅಳೆಯಲು ಸ್ಟಾಪ್‌ವಾಚ್‌ ಇದೆ. ಮೊಬೈಲಿನಲ್ಲೂ ಸ್ಟಾಪ್‌ವಾಚ್‌ ನೀಡಲಾಗಿರುತ್ತದೆ. ಆದರೆ ಹಿಂದೆ ಅಂಥ ಯಾವುದೇ ಸವಲತ್ತು ಇರಲಿಲ್ಲ. ಆ ಸಮಯದಲ್ಲಿ ಸಮಯವನ್ನು ಅಲೆಯಲು ಬಳಕೆಯಾಗುತ್ತಿದ್ದ ಉಪಕರಣ “ಅವರ್‌ ಗ್ಲಾಸ್‌’. ಎರಡು ಗಾಜಿನ ಬಲ್ಬ್ಗಳನ್ನು ಒಂದಕ್ಕೊಂದು ಕೂರಿಸಿ ತಯಾರಿಸುವ ಅವರ್‌ಗ್ಲಾಸ್‌ನ ಒಳಗೆ ಮರಳನ್ನು ತುಂಬಲಾಗುತ್ತದೆ. ಅವರ್‌ ಗ್ಲಾಸನ್ನು ಉಲ್ಟಾ ಮಾಡಿದರೆ ಬಲ್ಬಿನಿಂದ ಬಲ್ಬಿಗೆ ಮರಳು ಸ್ವಲ್ಪ ಸ್ವಲ್ಪವಾಗಿ ಸುರಿಯತೊಡಗುತ್ತದೆ.
ವಿವಿಧ ಗಾತ್ರದ ಅವರ್‌ಗ್ಲಾಸ್‌ ಮರಳು ವಿವಿಧ ಸಮಯವನ್ನು ತಿಳಿಸುತ್ತಿತ್ತು. ಗಾತ್ರ ಹೆಚ್ಚಿದಂತೆ ಅವು ತಿಳಿಸುವ ಸಮಯವೂ ಹೆಚ್ಚುತ್ತಿತ್ತು. ಅದರ ಹಿಂದಿನ ಲಾಜಿಕ್‌ ಇಷ್ಟೆ. ದೊಡ್ಡ ಗಾತ್ರದ ಅವರ್‌ ಗ್ಲಾಸ್‌ನಲ್ಲಿ ತುಂಬಾ ಮರಳನ್ನು ತುಂಬಬಹುದಿತ್ತು. ಹೀಗಾಗಿ ಮರಲು ಪೂರ್ತಿಯಾಗಿ ಸುರಿದು ಬೀಳಲು ಹೆಚ್ಚು ಸಮಯ ಬೇಕಾಗುತ್ತಿತ್ತು. ಹಿಂದೆಲ್ಲಾ ಸಮುದ್ರಯಾನ ಮಾಡುವ ಸಂದರ್ಭದಲ್ಲಿ ಅವರ್‌ ಗ್ಲಾಸ್‌ನಿಂದ ತುಂಬಾ ಸಹಾಯವಾಗುತ್ತಿತ್ತು. ಇಂದಿಗೂ ಬ್ಯಾಟರಿ ಬೇಡದ, ಅಲ್ಟಾವಯಲೆಟ್‌ ಕಿರಣ- ಕಾಂತ ಕ್ಷೇತ್ರ ಪ್ರಭಾವಕ್ಕೆ ಬಗ್ಗದೇ ಇರುವ ಈ ಸಾಧನವನ್ನು ವೈಜ್ಞಾನಿಕ ಕಾರಣಗಳಿಗಾಗಿ ಬಳಸುವುದುಂಟು.

ದಿಢೀರ್‌ ಮಾಡಬಹುದಾದ ಸ್ಪೆಷಲ್‌ ಸವಿರುಚಿ

a small introduction about various special recipes which is quickly prepared at home



ಇದು ಬೇಸಿಗೆ ಕಾಲ. ಇನ್ನೇನು ಮಕ್ಕಳಿಗೆ ರಜೆ ಶುರುವಾಗುತ್ತದೆ. ದಿನವಿಡೀ ಮನೆಯಲ್ಲೇ ಇರುವ ಮಕ್ಕಳು, “ಏನಾದ್ರೂ ತಿನ್ನೋಕೆ ಕೊಡು’ ಅಂತ ಕೇಳುತ್ತಾರೆ. ಮನೆಗೆ ಹೆಚ್ಚಿನ ಸಂಖ್ಯೆಯಲ್ಲಿ ನೆಂಟರಿಷ್ಟರು ಬರುವ ಕಾಲವೂ ಇದೇ. ಅತಿಥಿಗಳು ಬಂದಾಗ ಏನಾದ್ರೂ ಸ್ಪೆಷಲ್‌ ತಿನಿಸು ಮಾಡುವುದು ಪದ್ಧತಿ. ಇಂಥ ಸಂದರ್ಭಗಳಲ್ಲಿ ಮಾಡಬಹುದಾದ ಅಡುಗೆಗಳು ಇಲ್ಲಿವೆ.
1. ಬೆಂಡೆಕಾಯಿ ಪಕೋಡ
ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ಬೆಂಡೆಕಾಯಿ, ಕರಿಯಲು ಎಣ್ಣೆ, ಕಡಲೆ ಹಿಟ್ಟು-1 ಕಪ್‌, ಚಿಟಿಕೆ ಅಡಿಗೆ ಸೋಡಾ, ಅಚ್ಚ ಖಾರದ ಪುಡಿ- 2 ಚಮಚ, ಸಾಜೀರಾ, ಉಪ್ಪು, ಕರಿಬೇವು.
ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ, ಕಡಲೆ ಹಿಟ್ಟು, ಖಾರದ ಪುಡಿ, ಸಾಜೀರಾ, ಉಪ್ಪು, ಅಡುಗೆ ಸೋಡಾ, ಸ್ವಲ್ಪ ಬಿಸಿ ಮಾಡಿದ ಅಡುಗೆ ಎಣ್ಣೆ ಹಾಗೂ ಸಣ್ಣಗೆ ಉದ್ದುದ್ದ ಹೆಚ್ಚಿಟ್ಟ ಬೆಂಡೆಕಾಯಿಯನ್ನು ಹಾಕಿ ಹದವಾಗಿ ಕಲೆಸಿಕೊಳ್ಳಿ. ನಂತರ, ಕಾದ ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೆ ಕರಿಯಿರಿ. ಬಿಸಿ ಬಿಸಿ ಇರುವಾಗಲೇ ತಿಂದರೆ ಬಹಳ ರುಚಿಯಾಗಿರುತ್ತದೆ.
2. ಹೀರೆಕಾಯಿ ಬಜ್ಜಿ
ಬೇಕಾಗುವ ಸಾಮಗ್ರಿ: ಸಣ್ಣಗೆ ವೃತ್ತಾಕಾರದಲ್ಲಿ ಹೆಚ್ಚಿಕೊಂಡ ಹೀರೆಕಾಯಿ- 1 ಬಟ್ಟಲು, ಕಡಲೆಹಿಟ್ಟು- ಒಂದೂವರೆ ಬಟ್ಟಲು, ಕರಿಯಲು ಎಣ್ಣೆ, 1 ಚವåಚ ಜೀರಿಗೆ, 2 ಚಮಚ ಅಚ್ಚ ಖಾರದ ಪುಡಿ, ಉಪ್ಪು, ಒಂದು ಲೋಟ ನೀರು, ಚಿಟಿಕೆ ಅಡುಗೆ ಸೋಡ.
ಮಾಡುವ ವಿಧಾನ: ಕಡಲೆ ಹಿಟ್ಟಿಗೆ, ಖಾರದ ಪುಡಿ, ಅಡುಗೆ ಸೋಡಾ, ಉಪ್ಪು, ಜೀರಿಗೆ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು, ನಂತರ ನೀರು ಹಾಕಿ ದೋಸೆ ಹಿಟ್ಟಿನ ಹಂತಕ್ಕೆ ಕಲೆಸಿಕೊಳ್ಳಿ. ಆ ಹಿಟ್ಟಿನಲ್ಲಿ ಹೀರೇಕಾಯಿಯನ್ನು ಹಾಕಿ ಹತ್ತು ನಿಮಿಷ ನೆನೆಯಲು ಬಿಡಿ. ನಂತರ, ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ.
3. ಅನ್ನದ ಗಂಜಿ ಹಲ್ವ
ಬೇಕಾಗುವ ಸಾಮಗ್ರಿ: 2 ಬಟ್ಟಲು ಅನ್ನದ ಗಂಜಿ, ಒಂದು ಬಟ್ಟಲು ಅಕ್ಕಿ ಹಿಟ್ಟು, ಅರ್ಧ ಚಮಚ ಏಲಕ್ಕಿ ಪುಡಿ, ಒಂದು ಬಟ್ಟಲು ಸಕ್ಕರೆ, 2-4 ಚಮಚ ತುಪ್ಪ.
ಮಾಡುವ ವಿಧಾನ: ಗಂಜಿಗೆ ಅಕ್ಕಿ ಹಿಟ್ಟು ಬೆರೆಸಿ ಚೆನ್ನಾಗಿ ಗಂಟಿಲ್ಲದಂತೆ ಮಿಶ್ರಣ ಮಾಡಿ, ಬಾಣಲೆಗೆ ಹಾಕಿ ತಳ ಬಿಡದಂತೆ ಕುದಿಸಬೇಕು. ಮಿಶ್ರಣ ಗಟ್ಟಿಯಾದ ನಂತರ ಸಕ್ಕರೆ ಹಾಕಿ ಕರಗುವವರೆಗೂ ಕೈಯಾಡಿಸುತ್ತಿರಿ. ಸಕ್ಕರೆ ಕರಗಿದ ಮೇಲೆ ತುಪ್ಪ ಹಾಕಿ ತಳಬಿಡುವವರೆಗೂ ಕುದಿಸಿ, ಏಲಕ್ಕಿ ಪುಡಿ ಹಾಕಿ ಒಲೆಯಿಂದ ಕೆಳಗಿಳಿಸಿ. ಒಂದು ಪ್ಲೇಟ್‌ಗೆ ತುಪ್ಪ ಸವರಿ ಮಿಶ್ರಣವನ್ನು ಅದಕ್ಕೆ ಹಾಕಿ, ಸ್ವಲ್ಪ ತಣ್ಣಗಾದ ಮೇಲೆ ಬೇಕಾದ ಆಕಾರದಲ್ಲಿ ಕತ್ತರಿಸಿ. ಒಂದೆರಡು ಗಂಟೆ ಹೀಗೇ ಬಿಟ್ಟರೆ, ಹಲ್ವ ತಿನ್ನಲು ಸಿದ್ಧ.
4. ಸ್ವೀಟ್‌ ಬ್ರೆಡ್‌ ರೋಸ್ಟ್‌
ಬೇಕಾಗುವ ಸಾಮಗ್ರಿ: ಕತ್ತರಿಸಿಟ್ಟ ಬ್ರೆಡ್‌ ತುಂಡು-6, ಅರ್ಧ ಬಟ್ಟಲು ಸಕ್ಕರೆ, 2 ಚಮಚ ತುಪ್ಪ, ಕರಿಯಲು ಎಣ್ಣೆ, ಅರ್ಧ ಚಮಚ ಏಲಕ್ಕಿ ಪುಡಿ, ಅರ್ಧ ಬಟ್ಟಲು ನೀರು.
ಮಾಡುವ ವಿಧಾನ: ಬ್ರೆಡ್‌ ಅಂಚನ್ನು ತೆಗೆದು ತ್ರಿಭುಜಾಕೃತಿಯಲ್ಲಿ ಕತ್ತರಿಸಿಟ್ಟುಕೊಳ್ಳಿ. ನಂತರ, ಬ್ರೆಡ್‌ ತುಂಡುಗಳನ್ನು ಕಂದು ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿಯಿರಿ. ಒಂದು ಪಾತ್ರೆಗೆ ಸಕ್ಕರೆ, ನೀರು ಹಾಕಿ ತೆಳು ಪಾಕ ತಯಾರಿಸಿ. ಆ ಪಾಕಕ್ಕೆ ಏಲಕ್ಕಿ ಪುಡಿ ಹಾಕಿ, ಒಲೆಯಿಂದ ಕೆಳಗಿಳಿಸಿ ಬ್ರೆಡ್‌ ತುಂಡುಗಳನ್ನು 15-20 ನಿಮಿಷ ಅದರಲ್ಲಿ ಅದ್ದಿ ಇಡಿ.
– ಭಾಗ್ಯ ಆರ್‌.ಗುರುಕುಮಾರ್‌

ಹಲೋ, ಚಿಕ್ಕಮ್ಮಾ… ಅನ್ನ ಮಾಡೋದ್‌ ಹೇಗೆ?

how to make rice at home


ಮನೆಯಲ್ಲಿ ನಾನು, ಗಂಡ ಇಬ್ಬರೇ. ನನಗಂತೂ ನೀರು ಬಿಸಿ ಮಾಡೋದು ಬಿಟ್ಟರೆ, ಬೇರೇನೂ ಗೊತ್ತಿರಲಿಲ್ಲ. ಆನ್‌ಲೈನ್‌ ಆರ್ಡರ್‌ ಎಂಬ ಬಣ್ಣದ ಗುಳ್ಳೆಯನ್ನು, ಪತಿ ಮಹಾಶಯ “ಫ‌ಟ್‌’ ಎಂದು ಒಡೆದುಬಿಟ್ಟರು. ಬೆಳಕಿನಿಂದ ಕತ್ತಲೆಗೆ ಬಂದ ಅನುಭವ ನನಗೆ. ಅಮ್ಮ ಬಡಿಸಿದ್ದನ್ನು ಗಡದ್ದಾಗಿ ತಿಂದುಕೊಂಡಿದ್ದವಳಿಗೆ, ತಿಂಡಿ ಮಾಡಲು ಏನೇನು ಬೇಕು ಎಂಬ ಐಡಿಯಾ ಕೂಡ ಇರಲಿಲ್ಲ.
“ಇಂಗು ತೆಂಗು ಇದ್ದರೆ ಮಂಗನೂ ಅಡುಗೆ ಮಾಡುತ್ತದೆ’ ಅಂತ ಅದ್ಯಾರು ಹೇಳಿಧ್ದೋ ಗೊತ್ತಿಲ್ಲ. ಅಡುಗೆ ಮಾಡುವುದು ಅಂದ್ರೆ, ಹೇಳಿದಷ್ಟು ಸುಲಭದ ಕೆಲಸವಲ್ಲ. ಇನ್ನು, ಅಡುಗೆ ಮನೆಗೇ ಕಾಲಿಡದ ನನ್ನಂಥವರಿಗಂತೂ ಅದು ಬ್ರಹ್ಮವಿದ್ಯೆಯೇ!
ನಾನು, ಅಮ್ಮನ ಮುದ್ದಿನ ಮಗಳು. ನಾನಾಯ್ತು, ನನ್ನ ಆಫೀಸು ಕೆಲಸ ಆಯ್ತು ಅಂತ, ಅಡುಗೆ ಮನೆ ಕಡೆ ತಲೆ ಹಾಕಿ ಕೂಡ ಮಲಗದ ಮಾಡರ್ನ್ ಹುಡುಗಿ. “ಮದುವೆ ಆದ್ಮೇಲೂ ನಾನೇ ಬಂದು ಅಡುಗೆ ಮಾಡ್ಬೇಕಾಗುತ್ತೇನೋ. ಈ ಹುಡುಗಿ ಅದೇನ್‌ ಅಡುಗೆ ಮಾಡ್ತಾಳ್ಳೋ…’ ಅಂತೆಲ್ಲಾ ಅಮ್ಮ ಗೊಣಗಾಡಿದರೂ ಅದನ್ನು ನಾನು ಸೀರಿಯಸ್ಸಾಗಿ ತೆಗೆದುಕೊಂಡಿದ್ದೇ ಇಲ್ಲ. “ಅಡುಗೆ ಮಾಡಿಲ್ಲ ಅಂದ್ರೆ, ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದರಾಯ್ತು ಬಿಡು’ ಅಂತ ಅಮ್ಮನ ಬಾಯಿ ಮುಚ್ಚಿಸಿಬಿಡುತ್ತಿದ್ದೆ. “ದಿನಾಲೂ ಆನ್‌ಲೈನ್‌ನಲ್ಲಿ ಊಟಕ್ಕೆ ಆರ್ಡರ್‌ ಮಾಡೋಕೆ ನೀನೇನು ಕುಬೇರನ ಮಗಳೇ?’ ಅಂತ ಒಳ ಮನಸ್ಸು ಪ್ರಶ್ನಿಸುತ್ತಿದ್ದರೂ, ಅಡುಗೆ ಮಾಡಲು ಕಲಿಯುವ ಮನಸ್ಸು ಮಾಡಲಿಲ್ಲ ನಾನು.
ಅಂತೂ ಇಂತೂ ಮದುವೆ ಆಗಿ, ಮಂಗಳೂರಿನಿಂದ ಬೆಂಗಳೂರಿಗೆ ಬಂದೆ. ಗಂಡ, ಮನೆ, ಊರು… ಎಲ್ಲವೂ ಹೊಸದು. ಮನೆಯಲ್ಲಿ ನಾನು, ಗಂಡ ಇಬ್ಬರೇ. ನನಗಂತೂ ನೀರು ಬಿಸಿ ಮಾಡೋದು ಬಿಟ್ಟರೆ, ಬೇರೇನೂ ಗೊತ್ತಿರಲಿಲ್ಲ. ಆನ್‌ಲೈನ್‌ ಆರ್ಡರ್‌ ಎಂಬ ಬಣ್ಣದ ಗುಳ್ಳೆಯನ್ನು, ಪತಿ ಮಹಾಶಯ “ಫ‌ಟ್‌’ ಎಂದು ಒಡೆದುಬಿಟ್ಟರು. ಬೆಳಕಿನಿಂದ ಕತ್ತಲೆಗೆ ಬಂದ ಅನುಭವ ನನಗೆ. ಅಮ್ಮ ಬಡಿಸಿದ್ದನ್ನು ಗಡದ್ದಾಗಿ ತಿಂದುಕೊಂಡಿದ್ದವಳಿಗೆ, ತಿಂಡಿ ಮಾಡಲು ಏನೇನು ಬೇಕು ಎಂಬ ಐಡಿಯಾ ಕೂಡ ಇರಲಿಲ್ಲ.
ಅಡುಗೆ ಮನೆಯಲ್ಲಿ ನಿಂತಾಗ, ಎಲ್ಲಾ ಡಬ್ಬಗಳೂ ನನ್ನನ್ನು ನೋಡಿ ಡ್ಯಾನ್ಸ್‌ ಮಾಡಿದ ಹಾಗೆ ಅನ್ನಿಸತೊಡಗಿತು. ಇಂಗು ತೆಂಗು ಇದ್ದರೂ, ಅಡುಗೆ ಗೊತ್ತಿಲ್ಲದ ಮಂಗನಂತೆ ತಲೆ ತುರಿಸಿಕೊಳ್ಳುತ್ತಾ ನಿಂತಿದ್ದೆ. ಈ ಸಂಕಷ್ಟದಿಂದ ಪಾರಾಗುವುದು ಹೇಗೆ ಅಂತ ಯೋಚಿಸಿದಾಗ ನೆನಪಾಗಿದ್ದು, ಚಿಕ್ಕಮ್ಮ. ಅವರಿಗೆ ಫೋನ್‌ ಮಾಡಿ ಕೇಳಿದ ಮೊದಲ ಪ್ರಶ್ನೆ- “ಅನ್ನ ಹೇಗೆ ಮಾಡುವುದು?’ ಅವರಂತೂ, ತಲೆ ಚಚ್ಚಿಕೊಳ್ಳುತ್ತಲೇ, ಸೂಚನೆಗಳನ್ನು ನೀಡಿದರು. ಹಾಗೂ ಹೀಗೂ ಆಡಿಯೋ ಕಾಲ್‌, ವೀಡಿಯೋ ಕಾಲ್‌ ಮಾಡಿ, ಏನೇನು, ಎಷ್ಟೆಷ್ಟು ಹಾಕಬೇಕು, ಯಾವಾಗ ಹಾಕಬೇಕು ಎಂದು ಹತ್ತು ಸಲ ಕೇಳಿಕೊಂಡು, ಅನ್ನ-ನುಗ್ಗೇಕಾಯಿ ಪಲ್ಯ ಮಾಡಿ ಬಡಿಸುವಾಗ, ಎವರೆಸ್ಟ್‌ಗಿಂತ ಎತ್ತರದ ಶಿಖರ ಏರಿದ ಹಾಗೆ ಆಗಿತ್ತು. ಪತಿ ದೇವರು, “ಪರಾÌಗಿಲ್ಲ, ತಿನ್ನಲು ಅಡ್ಡಿ ಇಲ್ಲ’ ಎಂದು ಉಣ್ಣುತ್ತಿದ್ದರೆ, ಖುಷಿಯೋ ಖುಷಿ. ಎಲ್ಲರಿಗೂ ಕಾಲ್‌ ಮಾಡಿ, ನನ್ನ ಸಾಹಸವನ್ನು ಹೇಳಿದ್ದೇ ಹೇಳಿದ್ದು. ಬೆಂಗಳೂರಿಗೆ ಬಂದು ಒಂದು ತಿಂಗಳು ಚಿಕ್ಕಿಗೆ ಕಾಲ್‌ ಹೋಗ್ತಾನೇ ಇತ್ತು. ಈಗ ಸ್ವಲ್ಪ ಸುಧಾರಿಸಿಕೊಂಡಿದ್ದೇನೆ. ಆದರೆ, ನನ್ನ ಗಂಡನ ಮೇಲೆ ಪಾಕ ಪ್ರಯೋಗ ನಡೀತಾನೇ ಇದೆ. ನನಗೆ ತಿಳಿಯುವಂತೆ ಒಂದು ಕುಕ್‌ ಬುಕ್‌ ಮಾಡಿಕೊಂಡಿದ್ದೇನೆ, ರೆಸಿಪಿ ಮರೆತು ಹೋಗ್ಬಾರ್ಧು ಅಲ್ವಾ?
-ಪ್ರಶಾಂತಿ ಶೆಟ್ಟಿ ಕೆ.

ಬೊಜ್ಜನ್ನು ತಡೆಯಲು ಆರೋಗ್ಯಕರ ಜೀವನ ಶೈಲಿ

a small introduction about healthy lifestyle to prevent obesity


ಬೊಜ್ಜು ಅಥವಾ ಸ್ಥೂಲಕಾಯತೆ ಯಲ್ಲಿ ವ್ಯಕ್ತಿಯು ಅಸ್ವಾಭಾವಿಕ ಮತ್ತು ಅತಿಯಾದ ಕೊಬ್ಬನ್ನು ದೇಹದಲ್ಲಿ ಸಂಗ್ರಹಿಸಿರುವುದರಿಂದ ವ್ಯಕ್ತಿಯ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮಗಳು ಉಂಟಾಗುತ್ತವೆ.
ಒಬ್ಬ ವ್ಯಕ್ತಿಯಲ್ಲಿ ಸ್ಥೂಲಕಾಯತೆಯು ತಿನ್ನುವ ಆಹಾರದ ಕ್ಯಾಲೊರಿಗಳು ಮತ್ತು ಖರ್ಚು ಮಾಡುವ ಕ್ಯಾಲೊರಿಗಳಲ್ಲಿನ ವ್ಯತ್ಯಾಸದಿಂದಾಗುವ ಪರಿಸ್ಥಿತಿ. ಹೆಚ್ಚು ಕೊಬ್ಬಿರುವ ಆಹಾರವನ್ನು ಅತಿಯಾಗಿ ಸೇವಿಸುವುದರಿಂದ ಮತ್ತು ಅದಕ್ಕೆ ಸರಿಯಾಗಿ ದೈಹಿಕ ಚಟುವಟಿಕೆಯಲ್ಲಿ ಹೆಚ್ಚಳವಾಗದೆ ಇರುವುದರಿಂದ ದೇಹದ ತೂಕದಲ್ಲಿ ಹೆಚ್ಚಳವಾಗುತ್ತದೆ.
ಜಗತ್ತಿನಲ್ಲಿ ಸ್ಥೂಲಕಾಯತೆಯು ಜನರಲ್ಲಿ ಹೆಚ್ಚಾಗುತ್ತಿದೆ. ಇತ್ತೀಚೆಗಿನ‌ ದಾಖಲೆಗಳ ಪ್ರಕಾರ ಭಾರತದಲ್ಲಿ ಶೇ. 15-40 ಹಳ್ಳಿಯ ಜನರು ಮತ್ತು ಶೇ.20-50 ನಗರದ ಜನರು ಬೊಜ್ಜು ಹೊಂದಿರುತ್ತಾರೆ. ಇದಕ್ಕೆ ಪ್ರಮುಖ ಕಾರಣ ನಮ್ಮ ಆಧುನಿಕ ಜಡ ಜೀವನ ಶೈಲಿ ಮತ್ತು ಅತಿಯಾದ ಕ್ಯಾಲೊರಿಯುಳ್ಳ ಆಹಾರ ಸೇವನೆ. ಬೊಜ್ಜು ಹೆಚ್ಚಳದಿಂದ ಬೊಜ್ಜುತನ ಸಂಯೋಜಿತ ಕಾಯಿಲೆಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್‌, ಹೃದಯ ಸಂಬಂಧಿ ಕಾಯಿಲೆಗಳು, ಪಿತ್ತಜನಕಾಂಗದ ಕೊಬ್ಬು ಮತ್ತು ಕೆಲವು ಕ್ಯಾನ್ಸರ್‌ಗಳು ಹೆಚ್ಚಾಗುತ್ತಿವೆ.
ಅಮೆರಿಕದ ವೈದ್ಯಕೀಯ ಸಂಘದ ಪ್ರಕಾರ ಬೊಜ್ಜುತನವೇ ಒಂದು ಕಾಯಿಲೆ. ಬೊಜ್ಜು ಸಂಬಂಧಿ ಅಸ್ವಾಸ್ಥ್ಯಗಳಿಂದಾಗಿ ವ್ಯಕ್ತಿ ಮತ್ತು ಆರೋಗ್ಯ ರಕ್ಷಣೆ ಸಂಪನ್ಮೂಲಗಳ ಮೇಲೆ ಆರ್ಥಿಕ ಹೊರೆಯಾಗುತ್ತಿದೆ.
ಬೊಜ್ಜು ರೋಗ ನಿರ್ಣಯ
ಯುರೋಪಿಯನ್ನರಿಗೆ ಹೋಲಿಸಿದರೆ ಭಾರತೀಯರ ಬೊಜ್ಜುತನದ ವಿಶಿಷ್ಟ ಲಕ್ಷಣಗಳೆಂದರೆ ಅತಿಯಾದ ಕೇಂದ್ರ ಬೊಜ್ಜು ಅಥವಾ ಕಿಬ್ಬೊಟ್ಟೆಯ ಬೊಜ್ಜು. ಬೊಜ್ಜುತನ ನಿರ್ಣಯವನ್ನು ಬಾಡಿ ಮಾಸ್‌ ಇಂಡೆಕ್ಸ್‌ (ಬಿಎಂಐ) ಎಂಬ ವಿಧಾನದಿಂದ ನಿರ್ಣಯಿಸುತ್ತಾರೆ. ಬಿಎಂಐಯು ವ್ಯಕ್ತಿಯ ತೂಕವನ್ನು (ಕಿಲೋಗ್ರಾಂನಲ್ಲಿ) ಎತ್ತರ (ಮೀಟರ್‌ನ ವರ್ಗ)ದಿಂದ ಭಾಗಿಸಿದಾಗ ದೊರೆಯುತ್ತದೆ.
BMI> 23kg/m2 ಇರುವ ವ್ಯಕ್ತಿಯು ಅಧಿಕ ತೂಕ ಮತ್ತು
BMI> 25kg/m2 ನ ವ್ಯಕ್ತಿಯು ಬೊಜ್ಜುತನ ಹೊಂದಿರುತ್ತಾರೆ.
BMI> 18-23kg/m2 ನ ವ್ಯಕ್ತಿಯು ಆರೋಗ್ಯಕರ ದೇಹ ತೂಕ ಹೊಂದಿರುತ್ತಾರೆ.
ಆರೋಗ್ಯಕರ ತೂಕಕ್ಕೆ ಮಾಡಬೇಕಾದ ಜೀವನಶೈಲಿ ಬದಲಾವಣೆಗಳು ಆರೋಗ್ಯಕರ ಆಹಾರಕ್ರಮ ಮತ್ತು ನಿಯಮಿತ ದೈಹಿಕ ವ್ಯಾಯಾಮವು ಆರೋಗ್ಯಕರ ದೇಹದ ತೂಕಕ್ಕೆ ಮೂಲಾಧಾರ.
ಆರೋಗ್ಯಕರ ತಿನ್ನುವ ಹವ್ಯಾಸ
ತೂಕ ಕಡಿಮೆ ಮಾಡಲು ಮತ್ತು ಆರೋಗ್ಯಕರ ತೂಕ ನಿರ್ವಹಣೆಗೆ, ಆರೋಗ್ಯಕರ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು (ಸಂಕೀರ್ಣ ಕಾಬೊìಹೈಡ್ರೇಟ್‌, ಪ್ರೊಟೀನ್‌, ಹಣ್ಣು, ತರಕಾರಿ ಮತ್ತು ದ್ವಿದಳ ಧಾನ್ಯಗಳನ್ನು ಹೊಂದಿರುವರ ಆಹಾರ).
ಆರೋಗ್ಯಕರ ಆಹಾರ
ನಾವು ತಿನ್ನುವ ಆಹಾರ ಪ್ರಮಾಣವು (ಕ್ಯಾಲೊರಿಯಲ್ಲಿ), ನಮ್ಮ ವಯಸ್ಸು, ದೈಹಿಕ ಚಟುವಟಿಕೆಯ ಮೇಲೆ ಅವಲಂಬಿಸಿರುತ್ತದೆ.
ಆರೋಗ್ಯಕರ ತೂಕ ನಿರ್ವಹಣೆಗೆ ಈ ಕೆಳಗಿನ ಐದು ಆಹಾರ ವಸ್ತುಗಳನ್ನು ಮಿತವಾಗಿ ಸೇವಿಸಬೇಕು.
1. ಎಣ್ಣೆಯಲ್ಲಿ ಕರಿದ ತಿಂಡಿಗಳು. ಉದಾ: ಪಕೋಡ, ಸಮೋಸ, ಬೋಂಡ, ಚಿಪ್ಸ್‌ ಇತ್ಯಾದಿ. ಆಧುನಿಕ ದಿಢೀರ್‌ ಆಹಾರಗಳಾದ ಪಿಜ್ಜಾ, ಬರ್ಗರ್‌ ಮತ್ತು ಫೈಂಚ್‌ ಫ್ರೈ.
2. ಕೇಕ್‌ಗಳು, ಪೇಸ್ಟ್ರೀಸ್‌, ಬಿಸ್ಕತ್‌ ಮತ್ತು ಬೇಕರಿ ಪದಾರ್ಥಗಳು (ಇವು ಗಳೆಲ್ಲವೂ ಅಧಿಕ ಕ್ಯಾಲೋರಿಯುಕ್ತ).
3. ಸಕ್ಕರೆಯುಕ್ತ ಪಾನೀಯಗಳು ಮತ್ತು ರಸಗಳು (ಅಧಿಕ ಕ್ಯಾಲೊರಿ ಮತ್ತು ಫೈಬರ್‌ ರಹಿತ).
4. ಸಿಹಿತಿಂಡಿಗಳು, ವಿಶೇಷವಾಗಿ ಕರಿದ ಸಿಹಿತಿಂಡಿಗಳಾದ ಜಿಲೇಬಿ, ಗುಲಾಬ್‌ ಜಾಮೂನು, ಮೈಸೂರು ಪಾಕ್‌.
5. ಸಂಸ್ಕರಿಸಿದ ಆಹಾರ ವಸ್ತುಗಳು. ಉದಾ: ಮೈದಾ, ಜಾಮ್‌, ಜೆಲ್ಲಿ ಮತ್ತು ಪ್ಯಾಕೇಜ್‌ ಮಾಡಿದ ವಸ್ತುಗಳು.
ಕಡಿಮೆ ಸಂಸ್ಕರಿಸಿದ ಆಹಾರವನ್ನು ಹೆಚ್ಚಾಗಿ ಸೇವಿಸಿ
ಧಾನ್ಯಗಳು (ಗೋಧಿ, ಕುಚ್ಚಲಕ್ಕಿ, ರಾಗಿ)
ತರಕಾರಿಗಳು (ವಿವಿಧ ಬಣ್ಣಗಳವು) ದ್ವಿಧಳ ಧಾನ್ಯಗಳು, ಬೀಜ ಮತ್ತು ಪ್ರೊಟಿನ್‌ ಯುಕ್ತ ಪದಾರ್ಥಗಳು ಸಸ್ಯ ತ್ಯಲಗಳು (ಆಲಿವ್‌, ತೆಂಗಿನ ಎಣ್ಣೆ)
ಆರೋಗ್ಯಕರ ತಿನ್ನುವ ಅಭ್ಯಾಸಕ್ಕೆ ಸಲಹೆಗಳು
ಆರೋಗ್ಯಕರ ಬೆಳಗಿನ ಉಪಾಹಾರ: ಉತ್ತಮ ಉಪಾಹಾರದಿಂದ ದಿನವನ್ನು ಪ್ರಾರಂಭಿಸಿ. ಇದರಿಂದ ಉಳಿದ ದಿನದ ಅವಧಿಯಲ್ಲಿ ಅತಿಯಾಗಿ ತಿನ್ನುವುದನ್ನು ತಡೆಯಬಹುದು.
 ಸಣ್ಣ ಪ್ರಮಾಣದ ಊಟ ಮಾಡಿ- ನಿಧಾನವಾಗಿ ಮತ್ತು ಮಿತವಾಗಿ ತಿನ್ನಿ
 ತರಕಾರಿ ಮತ್ತು ಹಣ್ಣುಗಳನ್ನು ಜಾಸ್ತಿ ತಿನ್ನಿರಿ
 ಮನೆ ಊಟ ಮತ್ತು ಮನಃ ಪೂರ್ವಕವಾಗಿ ತಿನ್ನಿ
ಬೊಜ್ಜನ್ನು ತಡೆಯಲು ಆರೋಗ್ಯಕರ ಜೀವನ ಶೈಲಿ
ಕ್ಯಾಲೊರಿ ಆವಶ್ಯಕತೆ –
ಚಟುವಟಿಕೆ ಮತ್ತು  ವಯಸ್ಸಿನ ಪ್ರಕಾರ.
ನಮ್ಮ ದೈನಂದಿನ ಕ್ಯಾಲೊರಿ ಆವಶ್ಯಕತೆಯು 35-40 ವಯಸ್ಸಿನ ಅನಂತರ ಕಡಿಮೆಯಾಗುತ್ತದೆ (ಚಯಾಪಚಯದ ಪ್ರಕ್ರಿಯೆಯಲ್ಲಿ ಮತ್ತು ದೈಹಿಕ ಚಟುವಟಿಕೆಯಲ್ಲಿ ಕಡಿತದಿಂದಾಗಿ).
ಜೀವನದಲ್ಲಿ ಸಕ್ರಿಯವಾಗಿರಿ
ಆರೋಗ್ಯಕರ ಜೀವನಕ್ಕೆ ವಾರದಲ್ಲಿ ಎರಡೂವರೆ ಗಂಟೆಗಳ ಕಾಲ ಮಧ್ಯಮ ದೈಹಿಕ ಚಟುವಟಿಕೆಗಳು (ವೇಗದ ನಡಿಗೆ, ಡಾನ್ಸ್‌ಗಳು) ಅಥವಾ ಒಂದೂಕಾಲು ಗಂಟೆ ಕಾಲ ಜೋರಾದ ದೈಹಿಕ ಚಟುವಟಿಕೆಗಳನ್ನು (ಓಟ, ಈಜು, ಸೈಕಲ್‌ ತುಳಿತ ಅಥವಾ ಏರೋಬಿಕ್ಸ್‌) ಮಾಡಬೇಕು.
ಯಾವ ವ್ಯಾಯಾಮ?
ಎರಡು ವಿಧದ ವ್ಯಾಯಾಮಗಳು ಇವೆ. ಏರೋಬಿಕ್ಸ್‌ ಅಥವಾ ಐಸೋಟೋನಿಕ್‌ ವ್ಯಾಯಾಮಗಳು ಮತ್ತು ಐಸೊಮೈಟ್ರಿಕ್‌ ಅಥವಾ ಮಾಂಸ ಖಂಡ ಬಲಪಡಿಸುವ ವ್ಯಾಯಾಮಗಳು,
ಐಸೋಟೋನಿಕ್‌ ವ್ಯಾಯಾಮಗಳೆಂದರೆ: ವೇಗದ ನಡಿಗೆ, ಓಡುವುದು, ಸೈಕಲ್‌ ತುಳಿತ, ಟ್ರೆಡ್‌ ಮಿಲ್‌, ಈಜುವುದು ಮತ್ತು ಹೊರಾಂಗಣ ಆಟಗಳು.
ಐಸೋಮೆಟ್ರಿಕ್‌ ವ್ಯಾಯಾಮಗಳೆಂದರೆ ಭಾರ ಎತ್ತುವುದು, ಪುಷ್‌ ಅಪ್‌ಗ್ಳು.
ಹಿರಿಯ ವಯಸ್ಕರಿಗೆ ವಿಶೇಷವಾಗಿ ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಐಸೋಟೋನಿಕ್‌ ವ್ಯಾಯಾಮಗಳು (ನಡಿಗೆ) ಸೂಕ್ತ.
ಕಿರಿಯ ವಯಸ್ಕರು ಮತ್ತು ಗಟ್ಟಿ ಮುಟ್ಟಾದ ವ್ಯಕ್ತಿಗಳಿಗೆ ಐಸೋಟೋನಿಕ್‌ ಮತ್ತು ಐಸೋಮೆಟ್ರಿಕ್ಸ್‌ ವ್ಯಾಯಾಮಗಳ ಮಿಶ್ರಣ ಉತ್ತಮವಾದದ್ದು.
ಯೋಗ ಮತ್ತು ಯೋಗದ ವಿವಿಧ ಆಸನಗಳು ಮತ್ತು ಭಂಗಿಗಳು ಒಂದು ಉತ್ತಮ ಸಮತೋಲಿತ ಸಂಯೋಜನೆ.
ಸರಿಯಾದ ವ್ಯಾಯಾಮ ಆಯ್ಕೆಗೆ ಮೂರು ಪ್ರಮುಖ ಅಂಶಗಳನ್ನು ಪರಿಗಣಿಸಬೇಕು- ನಿಮ್ಮ ವಯಸ್ಸು, ಲಭ್ಯವಿರುವ ಅವಕಾಶಗಳು ಮತ್ತು ನಿಮ್ಮ ವ್ಯಕ್ವಿತ್ವ.
ಒಬ್ಬಂಟಿಯಾಗಿ ಮಾಡುವವರಿಗೆ ಬೆಳಗ್ಗಿನ ನಡಿಗೆ, ಓಟ ಅಥವಾ ಯೋಗ ಒಳ್ಳೆಯ ವ್ಯಾಯಾಮ.
ಜನರ ಜತೆಯಲ್ಲಿ ಮಾಡುವವರಿಗೆ, ಗುಂಪು ಚಟುವಟಿಕೆಗಳಾದ ಹೊರಾಂಗಣ ಕ್ರೀಡೆ, ಯೋಗ ಅಥವಾ ಏರೋಬಿಕ್ಸ್‌ ಉತ್ತಮ ವ್ಯಾಯಾಮ.
ಸರಿಯಾದ ವ್ಯಾಯಾಮ ಆಯ್ಕೆ ಮಾಡುವಾಗ, ಯಾವುದು ಉತ್ತಮ ಅನ್ನುವುದಕ್ಕಿಂತ, ಯಾವುದು ಪ್ರಾಯೋಗಿಕ, ಇಷ್ಟ ಮತ್ತು ಸ್ಥಿರವಾಗಿ ಮಾಡುವಂತಿರುವುದನ್ನು ಆಯ್ಕೆ ಮಾಡಿ.
ಹಿನ್ನುಡಿ
ವ್ಯಕ್ತಿಯ ಒಟ್ಟಾರೆ ಯೋಗಕ್ಷೇಮಕ್ಕೆ ಉತ್ತಮ ಆಹಾರ, ದೈಹಿಕ ಚಟುವಟಿಕೆ ಅನಿವಾರ್ಯ.
ಆರೋಗ್ಯಕರ ಜೀವನಕ್ಕೆ ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ಸಂತುಲಿತ ದೇಹದ ತೂಕ ಅತಿ ಆವಶ್ಯಕ.
ಡಾ| ಗಣೇಶ ಭಟ್‌,ಪ್ರೊಫೆಸರ್‌ ಮತ್ತು ಯೂನಿಟ್‌ ಹೆಡ್‌,
ಗ್ಯಾಸ್ಟ್ರೊಎಂಟರಾಲಜಿ ವಿಭಾಗ ಕೆಎಂಸಿ, ಮಣಿಪಾಲ