Showing posts with label Recipe. Show all posts
Showing posts with label Recipe. Show all posts

Monday, April 6, 2020

ಹಲೋ, ಚಿಕ್ಕಮ್ಮಾ… ಅನ್ನ ಮಾಡೋದ್‌ ಹೇಗೆ?

how to make rice at home


ಮನೆಯಲ್ಲಿ ನಾನು, ಗಂಡ ಇಬ್ಬರೇ. ನನಗಂತೂ ನೀರು ಬಿಸಿ ಮಾಡೋದು ಬಿಟ್ಟರೆ, ಬೇರೇನೂ ಗೊತ್ತಿರಲಿಲ್ಲ. ಆನ್‌ಲೈನ್‌ ಆರ್ಡರ್‌ ಎಂಬ ಬಣ್ಣದ ಗುಳ್ಳೆಯನ್ನು, ಪತಿ ಮಹಾಶಯ “ಫ‌ಟ್‌’ ಎಂದು ಒಡೆದುಬಿಟ್ಟರು. ಬೆಳಕಿನಿಂದ ಕತ್ತಲೆಗೆ ಬಂದ ಅನುಭವ ನನಗೆ. ಅಮ್ಮ ಬಡಿಸಿದ್ದನ್ನು ಗಡದ್ದಾಗಿ ತಿಂದುಕೊಂಡಿದ್ದವಳಿಗೆ, ತಿಂಡಿ ಮಾಡಲು ಏನೇನು ಬೇಕು ಎಂಬ ಐಡಿಯಾ ಕೂಡ ಇರಲಿಲ್ಲ.
“ಇಂಗು ತೆಂಗು ಇದ್ದರೆ ಮಂಗನೂ ಅಡುಗೆ ಮಾಡುತ್ತದೆ’ ಅಂತ ಅದ್ಯಾರು ಹೇಳಿಧ್ದೋ ಗೊತ್ತಿಲ್ಲ. ಅಡುಗೆ ಮಾಡುವುದು ಅಂದ್ರೆ, ಹೇಳಿದಷ್ಟು ಸುಲಭದ ಕೆಲಸವಲ್ಲ. ಇನ್ನು, ಅಡುಗೆ ಮನೆಗೇ ಕಾಲಿಡದ ನನ್ನಂಥವರಿಗಂತೂ ಅದು ಬ್ರಹ್ಮವಿದ್ಯೆಯೇ!
ನಾನು, ಅಮ್ಮನ ಮುದ್ದಿನ ಮಗಳು. ನಾನಾಯ್ತು, ನನ್ನ ಆಫೀಸು ಕೆಲಸ ಆಯ್ತು ಅಂತ, ಅಡುಗೆ ಮನೆ ಕಡೆ ತಲೆ ಹಾಕಿ ಕೂಡ ಮಲಗದ ಮಾಡರ್ನ್ ಹುಡುಗಿ. “ಮದುವೆ ಆದ್ಮೇಲೂ ನಾನೇ ಬಂದು ಅಡುಗೆ ಮಾಡ್ಬೇಕಾಗುತ್ತೇನೋ. ಈ ಹುಡುಗಿ ಅದೇನ್‌ ಅಡುಗೆ ಮಾಡ್ತಾಳ್ಳೋ…’ ಅಂತೆಲ್ಲಾ ಅಮ್ಮ ಗೊಣಗಾಡಿದರೂ ಅದನ್ನು ನಾನು ಸೀರಿಯಸ್ಸಾಗಿ ತೆಗೆದುಕೊಂಡಿದ್ದೇ ಇಲ್ಲ. “ಅಡುಗೆ ಮಾಡಿಲ್ಲ ಅಂದ್ರೆ, ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದರಾಯ್ತು ಬಿಡು’ ಅಂತ ಅಮ್ಮನ ಬಾಯಿ ಮುಚ್ಚಿಸಿಬಿಡುತ್ತಿದ್ದೆ. “ದಿನಾಲೂ ಆನ್‌ಲೈನ್‌ನಲ್ಲಿ ಊಟಕ್ಕೆ ಆರ್ಡರ್‌ ಮಾಡೋಕೆ ನೀನೇನು ಕುಬೇರನ ಮಗಳೇ?’ ಅಂತ ಒಳ ಮನಸ್ಸು ಪ್ರಶ್ನಿಸುತ್ತಿದ್ದರೂ, ಅಡುಗೆ ಮಾಡಲು ಕಲಿಯುವ ಮನಸ್ಸು ಮಾಡಲಿಲ್ಲ ನಾನು.
ಅಂತೂ ಇಂತೂ ಮದುವೆ ಆಗಿ, ಮಂಗಳೂರಿನಿಂದ ಬೆಂಗಳೂರಿಗೆ ಬಂದೆ. ಗಂಡ, ಮನೆ, ಊರು… ಎಲ್ಲವೂ ಹೊಸದು. ಮನೆಯಲ್ಲಿ ನಾನು, ಗಂಡ ಇಬ್ಬರೇ. ನನಗಂತೂ ನೀರು ಬಿಸಿ ಮಾಡೋದು ಬಿಟ್ಟರೆ, ಬೇರೇನೂ ಗೊತ್ತಿರಲಿಲ್ಲ. ಆನ್‌ಲೈನ್‌ ಆರ್ಡರ್‌ ಎಂಬ ಬಣ್ಣದ ಗುಳ್ಳೆಯನ್ನು, ಪತಿ ಮಹಾಶಯ “ಫ‌ಟ್‌’ ಎಂದು ಒಡೆದುಬಿಟ್ಟರು. ಬೆಳಕಿನಿಂದ ಕತ್ತಲೆಗೆ ಬಂದ ಅನುಭವ ನನಗೆ. ಅಮ್ಮ ಬಡಿಸಿದ್ದನ್ನು ಗಡದ್ದಾಗಿ ತಿಂದುಕೊಂಡಿದ್ದವಳಿಗೆ, ತಿಂಡಿ ಮಾಡಲು ಏನೇನು ಬೇಕು ಎಂಬ ಐಡಿಯಾ ಕೂಡ ಇರಲಿಲ್ಲ.
ಅಡುಗೆ ಮನೆಯಲ್ಲಿ ನಿಂತಾಗ, ಎಲ್ಲಾ ಡಬ್ಬಗಳೂ ನನ್ನನ್ನು ನೋಡಿ ಡ್ಯಾನ್ಸ್‌ ಮಾಡಿದ ಹಾಗೆ ಅನ್ನಿಸತೊಡಗಿತು. ಇಂಗು ತೆಂಗು ಇದ್ದರೂ, ಅಡುಗೆ ಗೊತ್ತಿಲ್ಲದ ಮಂಗನಂತೆ ತಲೆ ತುರಿಸಿಕೊಳ್ಳುತ್ತಾ ನಿಂತಿದ್ದೆ. ಈ ಸಂಕಷ್ಟದಿಂದ ಪಾರಾಗುವುದು ಹೇಗೆ ಅಂತ ಯೋಚಿಸಿದಾಗ ನೆನಪಾಗಿದ್ದು, ಚಿಕ್ಕಮ್ಮ. ಅವರಿಗೆ ಫೋನ್‌ ಮಾಡಿ ಕೇಳಿದ ಮೊದಲ ಪ್ರಶ್ನೆ- “ಅನ್ನ ಹೇಗೆ ಮಾಡುವುದು?’ ಅವರಂತೂ, ತಲೆ ಚಚ್ಚಿಕೊಳ್ಳುತ್ತಲೇ, ಸೂಚನೆಗಳನ್ನು ನೀಡಿದರು. ಹಾಗೂ ಹೀಗೂ ಆಡಿಯೋ ಕಾಲ್‌, ವೀಡಿಯೋ ಕಾಲ್‌ ಮಾಡಿ, ಏನೇನು, ಎಷ್ಟೆಷ್ಟು ಹಾಕಬೇಕು, ಯಾವಾಗ ಹಾಕಬೇಕು ಎಂದು ಹತ್ತು ಸಲ ಕೇಳಿಕೊಂಡು, ಅನ್ನ-ನುಗ್ಗೇಕಾಯಿ ಪಲ್ಯ ಮಾಡಿ ಬಡಿಸುವಾಗ, ಎವರೆಸ್ಟ್‌ಗಿಂತ ಎತ್ತರದ ಶಿಖರ ಏರಿದ ಹಾಗೆ ಆಗಿತ್ತು. ಪತಿ ದೇವರು, “ಪರಾÌಗಿಲ್ಲ, ತಿನ್ನಲು ಅಡ್ಡಿ ಇಲ್ಲ’ ಎಂದು ಉಣ್ಣುತ್ತಿದ್ದರೆ, ಖುಷಿಯೋ ಖುಷಿ. ಎಲ್ಲರಿಗೂ ಕಾಲ್‌ ಮಾಡಿ, ನನ್ನ ಸಾಹಸವನ್ನು ಹೇಳಿದ್ದೇ ಹೇಳಿದ್ದು. ಬೆಂಗಳೂರಿಗೆ ಬಂದು ಒಂದು ತಿಂಗಳು ಚಿಕ್ಕಿಗೆ ಕಾಲ್‌ ಹೋಗ್ತಾನೇ ಇತ್ತು. ಈಗ ಸ್ವಲ್ಪ ಸುಧಾರಿಸಿಕೊಂಡಿದ್ದೇನೆ. ಆದರೆ, ನನ್ನ ಗಂಡನ ಮೇಲೆ ಪಾಕ ಪ್ರಯೋಗ ನಡೀತಾನೇ ಇದೆ. ನನಗೆ ತಿಳಿಯುವಂತೆ ಒಂದು ಕುಕ್‌ ಬುಕ್‌ ಮಾಡಿಕೊಂಡಿದ್ದೇನೆ, ರೆಸಿಪಿ ಮರೆತು ಹೋಗ್ಬಾರ್ಧು ಅಲ್ವಾ?
-ಪ್ರಶಾಂತಿ ಶೆಟ್ಟಿ ಕೆ.

Friday, March 27, 2020

ಬಾಯಿರುಚಿ ಹೆಚ್ಚಿಸುವ ತಂಬುಳಿಗಳು

How to prepare tasty rasam recipes



ಬೇಸಿಗೆಗಾಲದಲ್ಲಿ ತಂಬುಳಿಗಳು ನಮ್ಮ ದೇಹವನ್ನು ತಂಪಾಗಿಡುವುದಲ್ಲದೆ ಆರೋಗ್ಯ ಸುಧಾರಣೆಗೂ ಉತ್ತಮ. ಹಿತ್ತಲಿನಲ್ಲಿ ದೊರೆಯುವ ಬಸಳೆ ಸೊಪ್ಪು , ಬೇವಿನ ಸೊಪ್ಪಿನಿಂದ ತಂಬುಳಿ ತಯಾರಿಸಿ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ಇಲ್ಲಿವೆ ಅಂತಹ ಕೆಲವು ರಿಸಿಪಿಗಳು.
ಬಸಳೆ ಚಿಗುರು ತಂಬುಳಿ
ಬೇಕಾಗುವ ಸಾಮಗ್ರಿ: ಒಂದು ಹಿಡಿ ಬಸಳೆ ಚಿಗುರು, ಜೀರಿಗೆ- 1 ಚಮಚ, ಸಣ್ಣ ತುಂಡು ಬೆಲ್ಲ, ಮಜ್ಜಿಗೆ- 3 ಸೌಟು (ಹುಳಿ ಇದ್ದರೆ ಕಡಿಮೆ ಸಾಕು), ಉಪ್ಪು ರುಚಿಗೆ, ಚೂರು ಬೆಣ್ಣೆ, ಹಸಿ ತೆಂಗಿನತುರಿ- 1 ಕಪ್‌. ಒಗ್ಗರಣೆಗೆ : ಮೆಣಸು, ಸಾಸಿವೆ, ಬೆಣ್ಣೆ ಚೂರು.
ತಯಾರಿಸುವ ವಿಧಾನ: ಬಸಳೆ ಚಿಗುರನ್ನು ಜೀರಿಗೆ, ಬೆಣ್ಣೆ ಹಾಕಿ ಹುರಿಯಬೇಕು. ಸ್ವಲ್ಪ ತಣ್ಣಗಾದ ಮೇಲೆ ತೆಂಗಿನತುರಿಯೊಂದಿಗೆ ನುಣ್ಣಗೆ ಬೀಸಬೇಕು. ಅದಕ್ಕೆ ಬೆಲ್ಲ , ಉಪ್ಪು, ಮಜ್ಜಿಗೆ, ಬೇಕಾದಷ್ಟು ನೀರು ಹಾಕಿ ಒಗ್ಗರಣೆ ಹಾಕಿದರೆ ಬಸಳೆ ಚಿಗುರು ತಂಬುಳಿ ತಯಾರು.
ಬೇವಿನ ಸೊಪ್ಪು ತಂಬುಳಿ
ಬೇಕಾಗುವ ಸಾಮಗ್ರಿ: ಬೇವಿನಸೊಪ್ಪು- 1 ಹಿಡಿ, ಜೀರಿಗೆ- 1 ಚಮಚ, ಒಳ್ಳೆ ಮೆಣಸು- 5 ಕಾಳು, ಹಸಿ ತೆಂಗಿನತುರಿ- 2 ಕಪ್‌, ಮಜ್ಜಿಗೆ- 2 ಸೌಟು, ಬೆಣ್ಣೆ- 1/2 ಚಮಚ, ಒಗ್ಗರಣೆಗೆ : ಒಣಮೆಣಸು, ಸಾಸಿವೆ, ಚೂರು ತುಪ್ಪ.
ತಯಾರಿಸುವ ವಿಧಾನ: ಶುದ್ಧೀಕರಿಸಿದ ಬೇವಿನಸೊಪ್ಪನ್ನು, ಜೀರಿಗೆ ಬೆಣ್ಣೆ ಹಾಕಿ ಹುರಿದುಕೊಳ್ಳಬೇಕು. ಹುರಿದ ಬೇವಿನಸೊಪ್ಪನ್ನು ತೆಂಗಿನತುರಿಯೊಂದಿಗೆ ನುಣ್ಣಗೆ ಬೀಸಿಕೊಳ್ಳಬೇಕು. ಬೀಸಿದ ಮಿಶ್ರಣಕ್ಕೆ ಮಜ್ಜಿಗೆ ಉಪ್ಪು ಹಾಕಿ ತಕ್ಕಷ್ಟು ನೀರು ಹಾಕಿ ಕುದಿಸಬೇಕು. ಸಣ್ಣಗೆ ಕುದಿಯುವಾಗ ಒಗ್ಗರಣೆ ಹಾಕಿದರೆ ಬೇವಿನಸೊಪ್ಪು ತಂಬುಳಿ ತಯಾರು.
ಉಪ್ಪಿನಕಾಯಿ ಮಿಡಿ ತಂಬುಳಿ
ಬೇಕಾಗುವ ಸಾಮಗ್ರಿ: ಉಪ್ಪಿನಕಾಯಿ ಮಿಡಿ- 2, ತೆಂಗಿನತುರಿ- 1 ಕಪ್‌, ಮಜ್ಜಿಗೆ – 2 ಸೌಟು, ಒಗ್ಗರಣೆಗೆ : ಎಣ್ಣೆ , ಮೆಣಸು, ಸಾಸಿವೆ.
ತಯಾರಿಸುವ ವಿಧಾನ: ಉಪ್ಪಿನಕಾಯಿ ಮಿಡಿಯನ್ನು ತೊಳೆದು ಹೆಚ್ಚಿನ ಖಾರ ತೆಗೆದುಬಿಡಬೇಕು. ಆಮೇಲೆ ಮಾವಿನ ಮಿಡಿಯನ್ನು ಮತ್ತು ತೆಂಗಿನತುರಿಯನ್ನು ನುಣ್ಣಗೆ ಬೀಸಬೇಕು. ಆ ಮಿಶ್ರಣವನ್ನು ಮಜ್ಜಿಗೆ, ಬೇಕಿದ್ದರೆ ಸ್ವಲ್ಪ ಉಪ್ಪು , ನೀರು ಹಾಕಿ ಕುದಿಸಬೇಕು. ಸಣ್ಣ ಕುದಿ ಬಂದಾಗ ಮೆಣಸು, ಸಾಸಿವೆ ಎಣ್ಣೆ ಹಾಕಿ ಒಗ್ಗರಣೆ ಕೊಟ್ಟರೆ ರುಚಿ ರುಚಿಯಾದ ಪರಿಮಳಯುಕ್ತ ತಂಬುಳಿ ತಯಾರು.
ಮೆಂತೆ ತಂಬುಳಿ
ಬೇಕಾಗುವ ಸಾಮಗ್ರಿ: ಮೆಂತೆ- 1 ಚಮಚ, ಸಣ್ಣ ತುಂಡು ಬೆಲ್ಲ, ಹುಳಿ ಮಜ್ಜಿಗೆ- 1 ಸೌಟು, ರುಚಿಗೆ ಉಪ್ಪು, ಚೂರು ಎಣ್ಣೆ ಅಥವಾ ಬೆಣ್ಣೆ. ತೆಂಗಿನತುರಿ- 1 ಕಪ್‌, ಕಾಳುಮೆಣಸು- 4 ಕಾಳು.
ತಯಾರಿಸುವ ವಿಧಾನ: ಮೆಂತೆಗೆ ಚೂರು ಎಣ್ಣೆ ಅಥವಾ ಬೆಣ್ಣೆ ಹಾಕಿ ಪಟಪಟ ಶಬ್ದ ಕೇಳುವಷ್ಟು ಹುರಿದುಕೊಳ್ಳಬೇಕು. ಹುರಿದ ಮೆಂತೆಯನ್ನು ತೆಂಗಿನತುರಿಯೊಂದಿಗೆ ಮಜ್ಜಿಗೆ ಉಪ್ಪು ಹಾಕಿ ನುಣ್ಣಗೆ ಬೀಸಬೇಕು. ಈ ಮಿಶ್ರಣಕ್ಕೆ ಬೆಲ್ಲ ತಕ್ಕಷ್ಟು ನೀರು ಸೇರಿಸಿ ಮೆಣಸು, ಸಾಸಿವೆ ಒಗ್ಗರಣೆ ಕೊಟ್ಟರೆ ಮೆಂತೆ ತಂಬುಳಿ ತಯಾರು.
ಅಶ್ವಿ‌ನಿಮೂರ್ತಿ