Showing posts with label special recipes. Show all posts
Showing posts with label special recipes. Show all posts

Monday, April 6, 2020

ದಿಢೀರ್‌ ಮಾಡಬಹುದಾದ ಸ್ಪೆಷಲ್‌ ಸವಿರುಚಿ

a small introduction about various special recipes which is quickly prepared at home



ಇದು ಬೇಸಿಗೆ ಕಾಲ. ಇನ್ನೇನು ಮಕ್ಕಳಿಗೆ ರಜೆ ಶುರುವಾಗುತ್ತದೆ. ದಿನವಿಡೀ ಮನೆಯಲ್ಲೇ ಇರುವ ಮಕ್ಕಳು, “ಏನಾದ್ರೂ ತಿನ್ನೋಕೆ ಕೊಡು’ ಅಂತ ಕೇಳುತ್ತಾರೆ. ಮನೆಗೆ ಹೆಚ್ಚಿನ ಸಂಖ್ಯೆಯಲ್ಲಿ ನೆಂಟರಿಷ್ಟರು ಬರುವ ಕಾಲವೂ ಇದೇ. ಅತಿಥಿಗಳು ಬಂದಾಗ ಏನಾದ್ರೂ ಸ್ಪೆಷಲ್‌ ತಿನಿಸು ಮಾಡುವುದು ಪದ್ಧತಿ. ಇಂಥ ಸಂದರ್ಭಗಳಲ್ಲಿ ಮಾಡಬಹುದಾದ ಅಡುಗೆಗಳು ಇಲ್ಲಿವೆ.
1. ಬೆಂಡೆಕಾಯಿ ಪಕೋಡ
ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ಬೆಂಡೆಕಾಯಿ, ಕರಿಯಲು ಎಣ್ಣೆ, ಕಡಲೆ ಹಿಟ್ಟು-1 ಕಪ್‌, ಚಿಟಿಕೆ ಅಡಿಗೆ ಸೋಡಾ, ಅಚ್ಚ ಖಾರದ ಪುಡಿ- 2 ಚಮಚ, ಸಾಜೀರಾ, ಉಪ್ಪು, ಕರಿಬೇವು.
ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ, ಕಡಲೆ ಹಿಟ್ಟು, ಖಾರದ ಪುಡಿ, ಸಾಜೀರಾ, ಉಪ್ಪು, ಅಡುಗೆ ಸೋಡಾ, ಸ್ವಲ್ಪ ಬಿಸಿ ಮಾಡಿದ ಅಡುಗೆ ಎಣ್ಣೆ ಹಾಗೂ ಸಣ್ಣಗೆ ಉದ್ದುದ್ದ ಹೆಚ್ಚಿಟ್ಟ ಬೆಂಡೆಕಾಯಿಯನ್ನು ಹಾಕಿ ಹದವಾಗಿ ಕಲೆಸಿಕೊಳ್ಳಿ. ನಂತರ, ಕಾದ ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೆ ಕರಿಯಿರಿ. ಬಿಸಿ ಬಿಸಿ ಇರುವಾಗಲೇ ತಿಂದರೆ ಬಹಳ ರುಚಿಯಾಗಿರುತ್ತದೆ.
2. ಹೀರೆಕಾಯಿ ಬಜ್ಜಿ
ಬೇಕಾಗುವ ಸಾಮಗ್ರಿ: ಸಣ್ಣಗೆ ವೃತ್ತಾಕಾರದಲ್ಲಿ ಹೆಚ್ಚಿಕೊಂಡ ಹೀರೆಕಾಯಿ- 1 ಬಟ್ಟಲು, ಕಡಲೆಹಿಟ್ಟು- ಒಂದೂವರೆ ಬಟ್ಟಲು, ಕರಿಯಲು ಎಣ್ಣೆ, 1 ಚವåಚ ಜೀರಿಗೆ, 2 ಚಮಚ ಅಚ್ಚ ಖಾರದ ಪುಡಿ, ಉಪ್ಪು, ಒಂದು ಲೋಟ ನೀರು, ಚಿಟಿಕೆ ಅಡುಗೆ ಸೋಡ.
ಮಾಡುವ ವಿಧಾನ: ಕಡಲೆ ಹಿಟ್ಟಿಗೆ, ಖಾರದ ಪುಡಿ, ಅಡುಗೆ ಸೋಡಾ, ಉಪ್ಪು, ಜೀರಿಗೆ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು, ನಂತರ ನೀರು ಹಾಕಿ ದೋಸೆ ಹಿಟ್ಟಿನ ಹಂತಕ್ಕೆ ಕಲೆಸಿಕೊಳ್ಳಿ. ಆ ಹಿಟ್ಟಿನಲ್ಲಿ ಹೀರೇಕಾಯಿಯನ್ನು ಹಾಕಿ ಹತ್ತು ನಿಮಿಷ ನೆನೆಯಲು ಬಿಡಿ. ನಂತರ, ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ.
3. ಅನ್ನದ ಗಂಜಿ ಹಲ್ವ
ಬೇಕಾಗುವ ಸಾಮಗ್ರಿ: 2 ಬಟ್ಟಲು ಅನ್ನದ ಗಂಜಿ, ಒಂದು ಬಟ್ಟಲು ಅಕ್ಕಿ ಹಿಟ್ಟು, ಅರ್ಧ ಚಮಚ ಏಲಕ್ಕಿ ಪುಡಿ, ಒಂದು ಬಟ್ಟಲು ಸಕ್ಕರೆ, 2-4 ಚಮಚ ತುಪ್ಪ.
ಮಾಡುವ ವಿಧಾನ: ಗಂಜಿಗೆ ಅಕ್ಕಿ ಹಿಟ್ಟು ಬೆರೆಸಿ ಚೆನ್ನಾಗಿ ಗಂಟಿಲ್ಲದಂತೆ ಮಿಶ್ರಣ ಮಾಡಿ, ಬಾಣಲೆಗೆ ಹಾಕಿ ತಳ ಬಿಡದಂತೆ ಕುದಿಸಬೇಕು. ಮಿಶ್ರಣ ಗಟ್ಟಿಯಾದ ನಂತರ ಸಕ್ಕರೆ ಹಾಕಿ ಕರಗುವವರೆಗೂ ಕೈಯಾಡಿಸುತ್ತಿರಿ. ಸಕ್ಕರೆ ಕರಗಿದ ಮೇಲೆ ತುಪ್ಪ ಹಾಕಿ ತಳಬಿಡುವವರೆಗೂ ಕುದಿಸಿ, ಏಲಕ್ಕಿ ಪುಡಿ ಹಾಕಿ ಒಲೆಯಿಂದ ಕೆಳಗಿಳಿಸಿ. ಒಂದು ಪ್ಲೇಟ್‌ಗೆ ತುಪ್ಪ ಸವರಿ ಮಿಶ್ರಣವನ್ನು ಅದಕ್ಕೆ ಹಾಕಿ, ಸ್ವಲ್ಪ ತಣ್ಣಗಾದ ಮೇಲೆ ಬೇಕಾದ ಆಕಾರದಲ್ಲಿ ಕತ್ತರಿಸಿ. ಒಂದೆರಡು ಗಂಟೆ ಹೀಗೇ ಬಿಟ್ಟರೆ, ಹಲ್ವ ತಿನ್ನಲು ಸಿದ್ಧ.
4. ಸ್ವೀಟ್‌ ಬ್ರೆಡ್‌ ರೋಸ್ಟ್‌
ಬೇಕಾಗುವ ಸಾಮಗ್ರಿ: ಕತ್ತರಿಸಿಟ್ಟ ಬ್ರೆಡ್‌ ತುಂಡು-6, ಅರ್ಧ ಬಟ್ಟಲು ಸಕ್ಕರೆ, 2 ಚಮಚ ತುಪ್ಪ, ಕರಿಯಲು ಎಣ್ಣೆ, ಅರ್ಧ ಚಮಚ ಏಲಕ್ಕಿ ಪುಡಿ, ಅರ್ಧ ಬಟ್ಟಲು ನೀರು.
ಮಾಡುವ ವಿಧಾನ: ಬ್ರೆಡ್‌ ಅಂಚನ್ನು ತೆಗೆದು ತ್ರಿಭುಜಾಕೃತಿಯಲ್ಲಿ ಕತ್ತರಿಸಿಟ್ಟುಕೊಳ್ಳಿ. ನಂತರ, ಬ್ರೆಡ್‌ ತುಂಡುಗಳನ್ನು ಕಂದು ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿಯಿರಿ. ಒಂದು ಪಾತ್ರೆಗೆ ಸಕ್ಕರೆ, ನೀರು ಹಾಕಿ ತೆಳು ಪಾಕ ತಯಾರಿಸಿ. ಆ ಪಾಕಕ್ಕೆ ಏಲಕ್ಕಿ ಪುಡಿ ಹಾಕಿ, ಒಲೆಯಿಂದ ಕೆಳಗಿಳಿಸಿ ಬ್ರೆಡ್‌ ತುಂಡುಗಳನ್ನು 15-20 ನಿಮಿಷ ಅದರಲ್ಲಿ ಅದ್ದಿ ಇಡಿ.
– ಭಾಗ್ಯ ಆರ್‌.ಗುರುಕುಮಾರ್‌