
ಅರಮನೆಯ ಬದುಕು ದಣಿವು ಮೂಡಿಸುವುದೇ? ಬ್ರಿಟನ್ ರಾಜಕುಮಾರಿ ಡಯಾನಾಳ ಕತೆಯನ್ನು ಕೇಳಿದರೆ ಹೌದು ಅನಿಸಬಹುದು. ಆಕೆಗೆ ಜನಸಾಮಾನ್ಯರೊಡನೆ ಬೆರೆಯಬೇಕು ಎಂಬಾಸೆ ತೀವ್ರವಾಗಿತ್ತು. ಆಕೆಯ ಪುತ್ರ ಪ್ರಿನ್ಸ್ ಹ್ಯಾರಿ ಮತ್ತು ಪತ್ನಿ ಮೇಘನ್ ಬ್ರಿಟನ್ ಅರಮನೆಯ ರಾಜವೈಭವದಲ್ಲಿ ಮುಳುಗಿದ್ದವರು. “ಘನತೆವೆತ್ತ’ ಎಂಬ ವಿಶೇಷಣದೊಂದಿಗೇ ಬಾಳಿ ನನಗೆ ಸಾಕಾಗಿದೆ ಎಂದು ಹೇಳಿರುವ ಪ್ರಿನ್ಸ್ ಹ್ಯಾರಿ ಅರಮನೆಯಿಂದ ಹೊರನಡೆದಿದ್ದಾರೆ.
ಪತ್ನಿ ಮೇಘನ್ ಮಾರ್ಕೆಲ್ ಮತ್ತು ಪುತ್ರನೊಂದಿಗೆ ಕೆನಡಾದ ವಿಕ್ಟೋರಿಯಾ ನಗರದಲ್ಲಿ ವಾಸ ಮಾಡಲು ನಿರ್ಧರಿಸಿದ್ದಾರೆ. ಹಾಗಂತ ಬ್ರಿಟನ್ ರಾಜಮನೆತನದ ಬಗ್ಗೆ ತಮಗೇನೂ ಬೇಸರವಿಲ್ಲ. ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರ ಬಗ್ಗೆ ಅಪಾರ ಗೌರವವಿದೆ ಎಂದೂ ದಂಪತಿ ಹೇಳಿದ್ದಾರೆ.
ಆದರೆ, ಜನರ ತೆರಿಗೆಯ ಹಣ ಬಳಸಿ ವೈಭೋಗದ ಜೀವನ ಮಾಡುವುದು ಬೇಡ ಎಂಬ ಇಚ್ಛೆಯಿಂದ ತಾವು, ಈ ವರ್ಷದ ವಸಂತ ಋತುವಿನಿಂದಲೇ ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದ್ದಾಗಿ ತಮ್ಮ ಇನ್‌ಸ್ಟಗ್ರಾಮ್‌ನಲ್ಲಿ ಹೇಳಿಕೊಂಡಿದ್ದರು. ಜನರು ಬಳಸುವ “ರಾಜ ರಾಣಿ’ ಎಂಬ ವಿಶೇಷಣಗಳಿಂದ ಮುಕ್ತಿ ಹೊಂದುವ ಆಕಾಂಕ್ಷೆ ಈ ದಂಪತಿಗಳದ್ದು.
No comments:
Post a Comment